ಬೆಂಗಳೂರು: ನಲವತ್ತು ವರ್ಷಗಳ ಹಿಂದೆಯೇ ನಾನು ಮೂಡಾ ನಿವೇಶನ ಪಡೆದು ಸ್ವಾಧೀನ ಪತ್ರವನ್ನೂ ಪಡೆದಿರುವುದಾಗಿ ಸಿಎಂ ಸಿದ್ದರಾಮಯ್ಯ ಹಸಿಸುಳ್ಳು ಹೇಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಡಿ ಕೆ, ಸಿದ್ದರಾಮಯ್ಯ ಅವರದ್ದು ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿಯ ಐಡಿಯಾಲಜಿ, ಅದು ಸಿದ್ದಾಲಜಿ ಎಂದು ಜರಿದಿದ್ದಾರೆ.
ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಹೇಳುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಸಿದ್ದರಾಮಯ್ಯನವರೇ, ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿದೆ ಅನಿಸುವುದಿಲ್ಲ ಎಂದು ಕುಟುಕಿದ್ದಾರೆ.
ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟೇ ಇಲ್ಲಾ. ಹಾಗಾದರೆ, ಇದರಲ್ಲಿ ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ,ಸುಳ್ಳು ಸಂಶೋಧಕ ಸಿದ್ದರಾಮಯ್ಯನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಾ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಮುಕ್ಕಿ ತಿಂದಿದೆ ಎಂದು ಇಡೀ ದೇಶ ಮಾತನಾಡುತ್ತಿದೆ. ದಾಖಲೆಗಳು ಹಾದಿಬೀದಿಯಲ್ಲಿ ಹೊರಳಾಡುತ್ತಿವೆ, ನಿಮ್ಮ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ ಎಲ್ಲವೂ ಕಳಚಿಬಿದ್ದಿದೆ, ನಿಮ್ಮ ಅಸಹಾಯತೆ ನನಗೆ ಅರ್ಥವಾಗುತ್ತದೆ. ಪಾಪ,ನಿಮ್ಮ ಪಕ್ಷದವರೇ ನಿಮಗೆ ಶರಪಂಜರ ಸೃಷ್ಟಿಸುತ್ತಿದ್ದಾರೆ ಎಚ್ಚರಿಕೆಯಿಂದಿರಿ ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎಂದಿದ್ದೀರಿ, ಅದು ನನಗೆ ಗೊತ್ತಿದೆ. ನಾನು ಕೇಂದ್ರ ಸಚಿವನಾಗಿ ಇನ್ನೂ ಎರಡು ತಿಂಗಳಾಗಿಲ್ಲ, ರಾಜ್ಯದ ಕೆಲಸ ಮಾಡೋಣ ಎಂದರೆ ನಿಮ್ಮ ಅಸಹಕಾರ, ಅಸೂಯೆ ಅಡ್ಡಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.