ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ: ವಿಡಿಯೋಗಳು ಅಸಲಿ

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದ ಪೆನ್‌ಡ್ರೈವ್‌ನಲ್ಲಿರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳು ಅಸಲಿ.

ಇದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.

ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಎಸ್‌ಐಟಿ ಎಲ್ಲಾ ವಿಡಿಯೋಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿತ್ತು.

ಈಗ ಪೊಲೀಸರ ಕೈಗೆ ಎಫ್‌ಎಸ್‌ಎಲ್‌ ವರದಿ ಸೇರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋಗಳು ಅಸಲಿಯಾಗಿದೆ. ಈ ವಿಡಿಯೋಗಳನ್ನು ಎಡಿಟಿಂಗ್ ಅಥವಾ ಮಾರ್ಫಿಂಗ್ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಡಿಯೋಗಳು ಅಸಲಿಯಾಗಿದ್ದರೂ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎನ್ನುವುದು ಸಾಬೀತಾಗಿಲ್ಲ, ಅಶ್ಲೀಲ ವಿಡಿಯೋದಲ್ಲಿರುವ ಪುರುಷನ ಮುಖ ಪ್ರದರ್ಶನವಾಗಿಲ್ಲ.

ಆದ್ದರಿಂದ ವಿಡಿಯೋದಲ್ಲಿರುವ ವ್ಯಕ್ತಿಗೂ, ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗೂ ಹೋಲಿಕೆ ಮಾಡಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಎಫ್‌ಎಸ್‌ಎಲ್‌ ವಿಡಿಯೋಗಳು ಅಸಲಿ ಎಂದು ವರದಿ ನೀಡಿದ್ದರೂ ಕೆಲ ವಿಡಿಯೋಗಳ ಬಗ್ಗೆ ಎಸ್‌ಐಟಿ ಸ್ಪಷ್ಟನೆ ಕೇಳಿದೆ.

ಎಸ್‌ಐಟಿಯ ಸ್ಪಷ್ಟನೆಗೆ ಎಫ್‌ಎಸ್‌ಎಲ್‌ ಉತ್ತರ ನೀಡಿದ ಬಳಿಕ ಪ್ರಜ್ವಲ್‌ ರೇವಣ್ಣ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.