ಮೈಸೂರು: ಆಷಾಢ ಮಾಸದ ಕೊನೆ ಶುಕ್ರವಾರದ ಪ್ರಯುಕ್ತ ನಾಡದೇವಿಯ ದರುಶನಕ್ಕಾಗಿ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂದಿದೆ.
ಸಿಂಹವಾಹಿನಿಯ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ತಾಯಿಯ ದರುಶನ ಪಡೆದ ಭಕ್ತರು ಪುನೀತರಾದರು.
ಬೆಟ್ಟದ ದೇವಿಕೆರೆಯಿಂದ ತಂದ ಜಲದಿಂದ ಚಾಮುಂಡೇಶ್ವರಿ ದೇವಿಗೆ ಮುಂಜಾನೆ ಅಭಿಷೇಕ ಮಾಡಿ ವಿವಿಧ ಹೂಗಳಿಂದ ಭವ್ಯವಾಗಿ ಅಲಂಕಾರ ಮಾಡಿ ಅಷ್ಟೋತ್ತರ, ಸಹಸ್ರನಾಮ ಪೂಜೆ ಸಲ್ಲಿಸಿ ತದನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಮುಂಜಾನಡಯಿಂದಲೇ ಭಕ್ತರು ಸರದಿಸಾಲಿನಲ್ಲಿ ನಿಂತು ಜಗನ್ಮಾತೆಯನ್ನು ಕಣ್ತುಂಬಿಕೊಂಡರು.
ದೇವಾಲಯದ ಆವರಣ ಹಾಗೂ ಪ್ರಾಂಗಣವನ್ನು ವಿವಿಧ ಪುಷ್ಪಗಳು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಶಕ್ತಿ ದೇವತೆಯ ದರ್ಶನಕ್ಕಾಗಿ ಬೆಳಿಗ್ಗೆ 4 ಗಂಟೆ ಯಿಂದಲೇ ಭಕ್ತರು ಮೆಟ್ಟಿಲುಗಳ ಮೂಲಕ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ವ್ಯವಸ್ಥೆ ಮಾಡಿರುವ ಉಚಿತ ಬಸ್ ಗಳಲ್ಲಿ ಬೆಟ್ಟಕ್ಕೆ ಆಗಮಿಸಿದ್ದರು.
ಮುಂಜಾಗ್ರತ ಕ್ರಮವಾಗಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಖಾಸಗಿ ವಾಹನಗಳಿಗೆ ಇಂದು ಕೂಡಾ ಪ್ರವೇಶ ನಿಷೇಧಿಸಲಾಗಿದೆ.