ಮೈಸೂರು: ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಶೋಕಾಸ್ ನೋಟೀಸ್ ಕೊಟ್ಟಿರುವುದು ಕಾನೂನುಬಾಹಿರ, ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಿಎಂ ದೂರಿದರು.
ಸಚಿವ ಸಂಪುಟ ಸಭೆಗೆ ಹೋದರೆ ಕೆಟ್ಟ ಸಾಂಪ್ರದಾಯವಾಗುತ್ತದೆ ಎಂದು ನಿನ್ನೆ ನಡೆದ ಸಭೆಗೆ ಹೋಗದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಸಭೆ ನಡೆಸಲು ನೇಮಿಸಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಸಿದ್ದು ಉತ್ತರಿಸಿದರು.
ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ನೋಟೀಸನ್ನು ಹಿಂಪಡೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ಟಿ. ಜೆ.ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್, ಆತನ ದೂರಿನ ಮೇಲೆ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ ವಿಚಾರ. ಆತ ಈ ರೀತಿ ಅನೇಕ ಜನರ ಮೇಲೆ ದೂರುಗಳನ್ನು ನೀಡಿದ್ದಾರೆ. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
26-7.2024 ರಂದು 11.30ಕ್ಕೆ ದೂರು ನೀಡಿದ್ದು, ಅಂದೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕಾನೂನು ವಿಷಯ ಒಳಗೊಂಡ ವಿಚಾರವನ್ನು,ಜನ ಆಶೀರ್ವಾದ ಮಾಡಿ ಕಳಿಸಿರುವ 136 ಶಾಸಕರನ್ನೊಳಗೊಂಡ ಸರ್ಕಾರದ ಮುಖ್ಯಮಂತ್ರಿಗೆ ನೋಟೀಸು ಕೊಡುವಾಗ ಎಲ್ಲಾ ಕಾನೂನನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಏನನ್ನೂ ನೋಡದೇ ಆತುರವಾಗಿ ಕೆಲಸ ಮಾಡಿದ್ದಾರೆ ಸಿದ್ದು ಬೇಸರಪಟ್ಟರು.
ಅಂದೇ ನೋಟೀಸು ನೀಡಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಪ್ರಭು ಶಂಕರ್ ಎಂಬುವರು ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿಯಾಗಿರುವುದರಿಂದ ಅದನ್ನು ಪಡೆಯಲಾಗಲಿಲ್ಲ. ಮಾರನೇ ದಿನ 2 ಗಂಟೆಗೆ ನೋಟೀಸನ್ನು ಆತುರವಾಗಿ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಶಶಿಕಲಾ ಜೊಲ್ಲೆ , ಮುರುಗೇಶ್ ನಿರಾಣಿ , ಜನಾರ್ಧನ್ ರೆಡ್ಡಿಯವರುಗಳ ಮೇಲೆ ದೂರುಗಳಿವೆ, ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯಪಾಲರಿಗೆ ಸಲಹೆ ನೀಡಬೇಕಿರುವುದು ನಮ್ಮ ಮಂತ್ರಿ ಮಂಡಲದವರು,ಆದರೆ ನಾವು ಸಲಹೆ ನೀಡಿಲ್ಲ, ಮುಖ ಕಾರ್ಯದರ್ಶಿಗಳು ವಿವರವಾದ ಪತ್ರವನ್ನು ಜುಲೈ 26 ರಂದು ಸಂಜೆ 6.30 ಕ್ಕೆ ರಾಜ್ಯಪಾಲರಿಗೆ ತಲುಪಿಸಿದ್ದಾರೆ.
ಅದನ್ನೂ ಅವರು ನೋಡಿಲ್ಲ,ಮುಡಾ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗವನ್ನು ಜುಲೈ 14 ರಂದು ಸರ್ಕಾರ ರಚಿಸಿದೆ,ಆಯೋಗದ ವರದಿಯನ್ನು ನಿರೀಕ್ಷಿಸಲಾಗಿದೆ,ತನಿಖೆ ನಡೆಸಿ ತಪ್ಪುಗಳಾಗಿದ್ದರೆ ವರದಿ ಸಲ್ಲಿಸುತ್ತಾರೆ ಅದೇನನ್ನೂ ಪರಿಗಣಿಸದೆ ರಾಜ್ಯಪಾಲರು ನೋಟೀಸು ನೀಡಿದ್ದಾರೆ ಎಂದು ಸಿಎಂ ಗರಂ ಆಗಿ ನುಡಿದರು.
ರಾಜ್ಯಪಾಲರು ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೆದರಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಶೋಕ್ ಹೆದರಿರಬಹುದು, ನಾನೇಕೆ ಹೆದರಬೇಕು, ಕಾನೂನು ರೀತಿ ಅವರು ನೋಟೀಸು ನೀಡಿಲ್ಲ, ತಪ್ಪು ಮಾಡಿದ್ದರೆ ಹೆದರಬೇಕು, ನಾನು ತಪ್ಪು ಮಾಡಿಲ್ಲವಲ್ಲಾ ಎಂದರು ಸಿದ್ದರಾಮಯ್ಯ.
ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ ಎಂದ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಪಾದಯಾತ್ರೆ ಬೇಡ, ಮಳೆ ಹೆಚ್ಚಾಗಿದೆ,ಜಲಾಶಯಗಳು ತುಂಬಿ ಪ್ರವಾಹ ಬಂದಿದೆ ಅದರ ಕಡೆಗೆ ಗಮನ ನೀಡಬೇಕೆಂದು ಹೇಳಿದ್ದರು, ಈಗ ಅದು ಮರೆತುಹೋಯಿತೇ ಹಾಗಾದರೆ ಅವರು ಸ್ವ ಇಚ್ಛೆ ಯಿಂದ ಪಾದಯಾತ್ರೆ ಮಾಡುತ್ತಿಲ್ಲ ಎಂದು ಟೀಕಿಸಿದರು.