ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಡಿಕೆಶಿ ಗುಳುಂ -ಹೆಚ್‌ಡಿಕೆ

ಬೆಂಗಳೂರು: ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ದಲಿತರಿಗೆ ಸಿಗಬೇಕಾದ ನಿವೇಶನಗಳನ್ನೂ ಡಿ.ಕೆ ಶಿವಕುಮಾರ್ ಗುಳುಂ ಮಾಡಿದ್ದಾರೆ ಎಂದು ಹೇಳಿದರು.

ಪಾದಯಾತ್ರೆ ವೇಳೆ ಮಾತನಾಡಿದ ಅವರು, ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ,ಇಂತವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದರು.

ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದ್ದೆ. ಯಾರಿಗೂ ಮೋಸ ಮಾಡಲಿಲ್ಲ. ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹೆಚ್ ಡಿ ಕೆ.

ಹೆಣ್ಣು ಮಗಳೊಬ್ಬಳನ್ನ‌ ಕಿಡ್ನ್ಯಾಪ್‌ ಮಾಡಿ ಬೆದರಿಕೆ ಹಾಕಿದ್ದು ಇವರು. ಆ ಹೆಣ್ಣುಮಗಳ ಅವರಪ್ಪನಿಂದ ಬೆದರಿಸಿ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದೀರಿ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು, ವಿಜಯೇಂದ್ರದು ಏನಿದೆ ಬಿಚ್ಚಿ, ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿ.ಕೆ ಶಿವಕುಮಾರ್‌ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದರು.

ನಾನು ಬಿಚ್ಚೋಕೆ ಹೋದ್ರೆ ನಿಮ್ಮದು ಪುಟ ಗಟ್ಟಲೆ ಇದೆ. ಅದನ್ನ ತನಿಖೆ ಮಾಡೋದಕ್ಕೆ ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನ ಸ್ಥಾಪನೆ ಮಾಡ್ಬೇಕು. ಅಜ್ಜಯ್ಯನ ಬಗ್ಗೆ ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ ಎಂದು ಪಂಥಾಹ್ವಾನ ನೀಡಿದರು.

ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದಾರೆ,ಆದ್ದರೆ ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.