ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19 ನೆ ನಂಬರ್ ಗೇಟ್ನ ಚೈನ್ ಲಿಂಕ್ ತುಂಡಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆ ಚೈನ್ ಲಿಂಕ್ ತುಂಡಾಗಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ.ಈ ಭಾಗದ ಬೆಳೆಗಳಿಗೂ ಹಾನಿಯಾಗಿದೆ.
ಅಪಾರ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳ ಪಾಲಿನ ಜೀವನಾಡಿಯಾದ ತುಂಗಭದ್ರ ಜಲಾಶಯದಿಂದ ನೀರು ಹರಿದು ಹೋಗುತ್ತಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ತಡ ರಾತ್ರಿಯೇ ಬೆಂಗಳೂರಿಂದ ಮುನಿರಬಾದ್ ಗೆ ಆಗಮಿಸಿದ ಸಚಿವ ತಂಗಡಗಿ ಜಲಾಶಯವನ್ನು ಪರಿಶೀಲನೆ ನಡೆಸಿದ್ದಾರೆ.
19 ಗೇಟ್ ದುರಸ್ಥಿಗಾಗಿ ಡ್ಯಾಂ ನಲ್ಲಿರುವ ಕನಿಷ್ಠ 60 ಟಿಎಂಸಿ ನೀರು ಖಾಲಿ ಅನಿವಾರ್ಯ ಎಂದು ಇಂಜಿನಿರುಗಳು ಹೇಳಿದ್ದಾರೆ. ತುಂಗಭದ್ರಾ ಜಲಾಶಯದ 19ನೇ ಗೇಟ್ ರಿಪೇರಿ ಕುರಿತು ಚರ್ಚಿಸಲು ಬೆಂಗಳೂರು, ಹೈದರಾಬಾದ್ ನಿಂದ ತಜ್ಞರನ್ನು ಕರೆಸಲಾಗುತ್ತಿದೆ.