ಅತಿಥಿ ಉಪನ್ಯಾಸಕರಿಗೆ ಶೀಘ್ರ ವೇತನ ಪಾವತಿ: ಸಿಎಂ ಘೋಷಣೆ

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಶೀಘ್ರದಲ್ಲಯೇ ವೇತನ ಪಾವತಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 14,447 ಉಪನ್ಯಾಸಕರಿಗೆ ಶೀಘ್ರದಲ್ಲಿ ಬಾಕಿ ವೇತನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ವಿಧಾನ ಪರಿಷತ್‍ನಲ್ಲಿ ಪ್ರಕಟಿಸಿದರು.
ಕೊರೊನಾ ಕಾರಣದಿಂದ ಕಾಲೇಜುಗಳು ಮುಚ್ಚಿವೆ. ಮಾರ್ಚ್ ತಿಂಗಳವರೆಗೆ ಎಲ್ಲ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಲಾಗಿದೆ. ಏಪ್ರಿಲ್‍ನಿಂದ ಆಗಸ್ಟ್ ವರೆಗಿನ ವೇತನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಧಾನ ಪರಿಷತ್ತಿನಲ್ಲಿ ಧರಣಿ ಆರಂಭಿಸಿದ್ದರು.
ಮುಖ್ಯಮಂತ್ರಿಗಳು ಸದನಕ್ಕೆ ಬಂದು ಈ ಘೋಷಣೆ ಮಾಡಿದ ನಂತರ ಮಂಜುನಾಥ್ ಪ್ರತಿಭಟನೆಯನ್ನು ವಾಪಸ್ ಪಡೆದರು.