ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಗೆದ್ದು‌ ಎನ್ ಡಿ ಎ ಭಾಗವಾಗುತ್ತೇನೆ: ಯೋಗೇಶ್ವರ್‌

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಯೋಗೇಶ್ವರ್‌ ಹೇಳಿಕೆ ನೀಡಿದ್ದಾರೆ.

ದೆಹಲಿಗೆ ತೆರಳುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಚನ್ನಪಟ್ಟಣದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ,ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ನಿಂತು ಗೆದ್ದು ಎನ್‌ಡಿಎ ಭಾಗವಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಏನೇನು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದು ತಿಳಿಸಿದರು.

ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ, ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ ಎಂದು ಹೇಳಿದರು.

ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಆಲೋಚನೆಯನ್ನೂ ಮಾಡಿಲ್ಲ, ಯಾರೂ ಈ ಬಗ್ಗೆ ನನ್ನನ್ನು ಮಾತನಾಡಿಸಿಲ್ಲ ಎಂದು ಯೋಗೇಶ್ವರ್ ತಿಳಿಸಿದರು.

ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು ಏನೇನೋ ಮಾತನಾಡುತ್ತಿರುತ್ತಾರೆ, ಅದು ಅವರ ರಾಜಕೀಯ ತಂತ್ರಗಾರಿಕೆ, ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿರುತ್ತೆ ಎಂದು ಹೇಳಿದರು.