ಸಂಪನ್ಮೂಲದ ಗ್ಯಾರಂಟಿ ಇಲ್ಲದೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ಜಾರಿಗೆ:ಅಶೋಕ್

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆಯೇ ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ ಎಂದು ವ್ಯಂಗ್ಯ ವಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು, ಇಂತಹ ಸ್ಥಿತಿಯಲ್ಲಿ ಸಂಪನ್ಮೂಲದ ಗ್ಯಾರಂಟಿಯೇ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ತರಲಾಗಿದೆ ಹಾಗಾಗಿ ಅದನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಬೆಸ್ಕಾಂ ಮತ್ತಿತರ ಇಲಾಖೆಗಳು ನಷ್ಟದಲ್ಲಿವೆ,ಆದ್ದರಿಂದ ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ದಿನ ದೂರವಿಲ್ಲ, ಅದಕ್ಕೂ ಮೊದಲೇ ಎಚ್ಚೆತ್ತುಕೊಳ್ಳಲಿ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಲು ನಮ್ಮ ಸರ್ಕಾರ ಅನುದಾನ ಮೀಸಲಿಟ್ಟಿತ್ತು,ಆದರೆ ಅದನ್ನು ಈ ಸರ್ಕಾರ ಗ್ಯಾರಂಟಿಗೆ ನೀಡಿದೆ,

ಪಾದಚಾರಿ ಮಾರ್ಗ, ಮೇಲ್ಸೇತುವೆ, ರಾಜಕಾಲುವೆ ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು ಅಶೋಕ್.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಾಮೂಹಿಕ ನಾಯಕತ್ವದಲ್ಲಿ ನಡೆದ ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ನನಗೆ ಕರೆ ಮಾಡಿ, ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಹೇಳಿದ್ದರು. ಪಾದಯಾತ್ರೆ ಯಶಸ್ವಿಯಾಗಿರುವುದರಿಂದಲೇ ಕಾಂಗ್ರೆಸ್‌ ನಾಯಕರು ಭಯಕ್ಕೊಳಗಾಗಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಗುಡುಗಿದರು.

ಬಳ್ಳಾರಿ ಪಾದಯಾತ್ರೆಗೆ ಕೇಂದ್ರದ ನಾಯಕರು ಒಪ್ಪಿಗೆ ನೀಡಿದರೆ ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಸಣ್ಣ ಪುಟ್ಟ ವ್ಯತ್ಯಾಸ ಇರುವುದು ನನ್ನ ಗಮನಕ್ಕೂ ಬಂದಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಮೊದಲಾದವರನ್ನು ಕೇಂದ್ರದ ನಾಯಕರು ಕರೆಸಿ ಈ ಹಿಂದೆಯೂ ಚರ್ಚೆ ಮಾಡಿದ್ದಾರೆ. ಈ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಸಿ.ಪಿ.ಯೋಗೇಶ್ವರ್‌ ಅವರ ಮನೆಗೆ ಹೋಗಿ ಚರ್ಚೆ ಮಾಡಲಾಗಿದೆ, ಬಂಡಾಯ ಸ್ಪರ್ಧೆ  ಸರಿಯಲ್ಲ, ಏಕ ಅಭ್ಯರ್ಥಿ ಸ್ಪರ್ಧಿಸುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ‌ ಎಂದು ಪ್ರತಿಪಕ್ಷದ ನಾಯಕರು ಹೇಳಿದರು.