ನಮ್ಮ ಹೆಮ್ಮೆಯ ಸೈನಿಕರಿಗೆ ತಲೆಬಾಗಿ ನಮಿಸೋಣ -ಮಹದೇವಪ್ಪ ಕರೆ

ಮೈಸೂರು: ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳು ನಮ್ಮ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈಸದಾನದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ಒಟ್ಟಾರೆ ಹಲವಾರು ಸಾಧು ಸಂತರು, ಸ್ವಾತಂತ್ರ್ಯ ಯೋಧರು, ದೇಶ ಪ್ರೇಮಿಗಳು, ಹಿರಿಯರ ಹೋರಾಟ ಹಾಗೂ ಪರಿಶ್ರಮದಿಂದ ಕಟ್ಟಿ ಬೆಳಸಿರುವ ಈ ದೇಶದ‌ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಡಾ, ಮಹದೇವಪ್ಪ ನಾಡಿನ ಕರೆ ನೀಡಿದರು.

ದೇಶ ಪ್ರೇಮ ನಮ್ಮಲ್ಲಿ ಪ್ರತಿದಿನ ಪ್ರತಿಕ್ಷಣ ಇರಬೇಕು,ನಾವಿಂದು ಸುರಕ್ಷಿತವಾಗಿ, ನಿಶ್ಚಿಂತೆಯಿಂದ ಇರಲು ಕಾರಣ ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ಸೈನಿಕರಿಗೆ ಒಮ್ಮೆ ತಲೆಬಾಗಿ ನಮಿಸೋಣ ಎಂದು ಸಚಿವ ಮಹದೇವಪ್ಪ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ರಾಜ್ಯದಲ್ಲಿ ಬಹುತೇಕ ಜನತೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಅನೇಕ ಮಹಾನ್ ಚೇತನರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಭಿವೃದ್ಧಿಯೇ ಸ್ವಾತಂತ್ರ್ಯ ಹೀಗಾಗಿ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದರು. 

ಇದನ್ನು ನಾನು ಕರ್ನಾಟಕ ಅಭಿವೃದ್ದಿ ಮಾದರಿ ಎಂದು ಹೆಮ್ಮೆಯಿಂದ ಕರೆಯುತ್ತೇನೆ ಎಂದವರು ಹೇಳಿದರು.

ಮೈಸೂರು ಜಿಲ್ಲೆಗೆ 2023-24ನೇ ಸಾಲಿನಲ್ಲಿ ಬಜೆಟ್ ಘೋಷಿಸಿರುವಂತೆ ಭೌಗೊಳಿಕ ಗುರುತು ಬೆಳೆಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಇವುಗಳ ವಿಸ್ತೀರ್ಣ ಹೆಚ್ಚಳ ಹಾಗೂ ಉತ್ಪಾದನೆಗೆ ಉತ್ತೇಜನ, ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಗಳ ಸಂರಕ್ಷಣೆಯ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶಕ್ತಿ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 10.20 ಕೋಟಿ ಮಹಿಳೆಯರು ಅನುಕೂಲ‌ಪಡೆದಿದ್ದಾರೆ, ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಈವರೆಗೆ ಜಿಲ್ಲೆಯಲ್ಲಿ 6,66,264 ಫಲಾನುಭವಿಗಳು ಪಡೆದಿದ್ದಾರೆ ಎಂದು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದರು.

ನಂಜನಗೂಡು ತಾಲ್ಲೂಕು ದೇವನೂರು ಗ್ರ್ರಾಮದ ಬಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ರೂ 90 ಕೋಟಿ ಅನುದಾನದಲ್ಲಿ ಒಟ್ಟು 17 ಕೆರೆಗಳಿಗೆ ನೀರು ತುಂಬಿಸಲು ಹಾಗೂ ಕೆ.ಆರ್. ನಗರ ತಾಲ್ಲೂಕು ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ರೂ 50ಕೋಟಿಗಳ ಅನುದಾನದಲ್ಲಿ ಒಟ್ಟು 29 ಕೆರೆಗಳಿಗೆ ನೀರು ತುಂಬಿಸಲು  ಯೋಜಿಸಲಾಗಿದೆ ಎಂದು ಮಹದೇವಪ್ಪ ಹೇಳಿದರು.

ಸಮಾರಂಭದಲ್ಲಿ ಶಾಸಕ ತನ್ವೀರ್ ಸೇಠ್, ಮೂಡಾ ಅಧ್ಯಕ್ಷ ಕೆ. ಮರಿಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಐ ಜಿ ಪಿ ಬೋರಲಿಂಗಯ್ಯ,ನಗರ ಪೊಲೀಸ್ ಆಯುಕ್ತ ರಾದ ಸೀಮಾ ಲಾಟ್ಕರ್, ಜಿ. ಪಂ ಸಿಇಒ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಶಿವರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.