ಅದ್ದೂರಿ ನಾಡಹಬ್ಬ ದಸರಾ ಆಚರಣೆ:ಡಾ.ಹೆಚ್ ಸಿ ಮಹದೇವಪ್ಪ

ಮೈಸೂರು:ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಜನರು ಖುಷಿಯಿಂದ ಇದ್ದಾರೆ, ಆದ್ದರಿಂದ ವಿಶ್ವವಿಖ್ಯಾತ ನಾಡ ಹಬ್ಬ ದಸರಾ ವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆ ಕುರಿತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮೊನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ದಸರಾ ಆಚರಣೆಗೆ ಅನುದಾನ, ಅನುದಾನ ಬಳಕೆಗೆ 4ಜಿ ವಿನಾಯಿತಿ ನೀಡುವ ಬಗ್ಗೆ ಹಾಗೂ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ.

ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಬೇಕು ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45 ಗಂಟೆಯೊಳಗೆ ದಸರಾ ಉದ್ಘಾಟನೆ ಮಾಡಲಾಗುವುದು ಎಂದು ಮಹದೇವಪ್ಪ ತಿಳಿಸಿದರು.

ಈ ಬಾರಿ ದಸರಾ ಆಚರಣೆಗೆ 40 ಕೋಟಿ ವರೆಗೂ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಮೈಸೂರು ನಗರದ ಎಲ್ಲಾ ರಸ್ತೆಗಳನ್ನು ಪರಿಶೀಲಿಸಿ ಗುಂಡಿ ಮುಚ್ಚಿ, ಮರು ಡಾಂಬರೀಕರಣ ಮಾಡಲಾಗುವುದು ಎಂದು ‌ಹೇಳಿದರು.

ಆಹಾರ ಮೇಳವನ್ನು ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಲು ಸೂಚಿಸಲಾಗಿದೆ

ದೀಪಾಲಂಕಾರವನ್ನು ದಸರಾ ಮಹೋತ್ಸವದಲ್ಲಿ ಪ್ರಮುಖ ವೃತ್ತಗಳಲ್ಲಿ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳಿಗೆ ಕಳೆದ ಎರಡು ವರ್ಷಗಳಲ್ಲಿನ ಕಾರ್ಯಕ್ರಮಗಳು ಹಾಗೂ ಕಲಾವಿದರೂ ಪುನರಾವರ್ತನೆಯಾಗದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರು ತಿಳಿಸಿದರು.

ಚಿಣ್ಣರ ದಸರಾ, ಮಹಿಳಾ ದಸರಾ ಹಾಗೂ ರೈತ ದಸರ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಸಬೇಕು. ಸ್ವಾತಂತ್ರ್ಯ ದೇಶಾಭಿಮಾನದ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳು, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ಮಹದೇವಪ್ಪ ತಿಳಿಸಿದರು.

ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ದಸರಾ ಆಚರಣೆಗೆ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಗಜ ಪಯಣವನ್ನು ಆಗಸ್ಟ್ 21 ರಂದು ನಿಗದಿ ಮಾಡಲಾಗಿದೆ. ಕರ್ನಾಟಕ ಸಂಭ್ರಮ 50 ನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ ಆಹಾರ ಮೇಳ ಕನಿಷ್ಠ 1 ತಿಂಗಳು ಇರಬೇಕು, ಮೇಳದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಗುಣಮಟ್ಟದ ಆಹಾರವನ್ನು, ಕಡಿಮೆ ದರದಲ್ಲಿ ನೀಡಬೇಕು ಎಂದು ತಿಳಿಸಿದರು.

ಅರಣ್ಯ ವಸತಿ ಹಾಗೂ ವಿಹಾರ ದಾಮಗಳ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು ಮಾತನಾಡಿ ಅರ್ಜುನ ಆನೆ ವೀರ ಮರಣ ಹೊಂದಿದ್ದು ಅದರ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಜಿ ಟಿ ದೇವೇಗೌಡ, ಕೆ.ಹರೀಶ್ ಗೌಡ, ರಮೇಶ್ ಬಂಡಿ ಸಿದ್ದೇಗೌಡ, ಪುಟ್ಟ ರಂಗ ಶೆಟ್ಟಿ, ಶ್ರೀವತ್ಸ,ಡಿ ರವಿಶಂಕರ್,ಹೆಚ್.ಎಂ ಗಣೇಶ್ ಪ್ರಸಾದ್,
ಎ.ಆರ್ ಕೃಷ್ಣ ಮೂರ್ತಿ,
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಡಿ. ತಿಮ್ಮಯ್ಯ, ಕೆ ವಿವೇಕಾನಂದ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.