ಇಸ್ರೋ ದಿಂದ ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹ ಯಶಸ್ವಿಉಡಾವಣೆ

ಶ್ರೀಹರಿಕೋಟ: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹವನ್ನು ಇಸ್ರೋ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡ್ಡಯನ ಕೇಂದ್ರದಿಂದ ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿ 9.17 ಕ್ಕೆ ಉಪಗ್ರಹ ಉಡಾವಣೆ ಮಾಡಲಾಗಿದ್ದು, ಭೂಮಿಯ ವೀಕ್ಷಣಾ ಉಪಗ್ರಹ  ಇಒಎಸ್‌-08   ಹೊತ್ತಿದ್ದ ಕಿರು ಉಪಗ್ರಹ ಉಡಾವಣಾ ವಾಹನ-D3 ನಭಕ್ಕೆ ಚಿಮ್ಮಿತು.

ಈ ಮಿಷನ್‌ನ ಉದ್ದೇಶ ಮೈಕ್ರೋಸ್ಯಾಟಲೈಟ್ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿದ್ದು, ಉಪಗ್ರಹವು ಉದ್ದೇಶಿತ ಕಕ್ಷೆ ಸೇರಿದೆ.

ಜೊತೆಗೆ ಭವಿಷ್ಯ ಉಪಗ್ರಹಗಳ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

EOS-08 ಉಪಗ್ರಹ ಎಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (EOIR), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R) ಮತ್ತು SiC UV ಡೋಸಿಮೀಟರ್ ಎಂಬ ಮೂರು ಪೇಲೋಡ್‌ಗಳನ್ನು ಹೊಂದಿದೆ.

EOIR ಪೇಲೋಡ್: ಮಿಡ್-ವೇವ್ IR (MIR) ಮತ್ತು ಲಾಂಗ್-ವೇವ್ IR (LWIR) ಬ್ಯಾಂಡ್‌ಗಳಲ್ಲಿ, ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆಗಾಗಿ ದಿನವಿಡೀ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಜ್ವಾಲಾಮುಖಿ ಕಾರ್ಯಾಚರಣೆ ಪತ್ತೆ, ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸಹ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.