ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸಚಿವರು ನಾಯಕರ ಅಸಮಾಧಾನ

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಸಂಬಂಧ  ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ‌ ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸಚಿವರು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಡಾ ಜಿ ಪರಮೇಶ್ವರ್ ಈ ಕುರಿತು ಮಾತನಾಡಿ, ಯಾವ ರೀತಿಯಲ್ಲಿ ಗವರ್ನರ್​ ‌ಅನುಮತಿ ಕೊಟ್ಟಿದ್ದಾರೆಂದು ಗೊತ್ತಿಲ್ಲ,ನಾವು ಕಾನೂನು ಹೋರಾಟ ಮಾಡುತ್ತೇವೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಒತ್ತಡ ಇರುವುದು ಸ್ಪಷ್ಟವಾಗುತ್ತಿದೆ. ರಾಜ್ಯಪಾಲರ ಭವನ ರಾಜಕೀಯ ನಿವಾಸವಾಗುತ್ತಿದೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಮೌಖಿಕವಾಗಿ, ಪತ್ರ ವ್ಯವಹಾರ ಮಾಡಿಲ್ಲ,ಈ ಬಗ್ಗೆ ‌ನಾವು ರಾಜ್ಯಪಾಲರ ಶೋಕಾಸ್ ನೋಟಿಸ್​ಗೆ ಎಳೆ ಎಳೆಯಾಗಿ ಉತ್ತರ ಕೊಟ್ಟಿದ್ದೆವು. ಆದರೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ಕೊಟ್ಟಿದ್ದಾರೆ, ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ ಎಂದು ಆರೋಪಿಸಿದರು.

ನಮಗೆ ಕಾನೂನು ಹೋರಾಟ ಅನಿವಾರ್ಯವಾಗಿದೆ. ಮುಂದಿನ ಕಾನೂನು ರೂಪುರೋಷಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ,ಶೋಕಾಸ್​ ನೋಟಿಸ್​ ಕೊಟ್ಟಾಗಲೇ ಇದು ಷಡ್ಯಂತ್ರ ಎಂಬುದು ಗೊತ್ತಾಯಿತು, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ‌, ಬಿಜೆಪಿಯವರು ಸಂವಿಧಾನ ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್​ ಈ ಕುರಿತು ಮಾತನಾಡಿದ್ದು,ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ, ಸೈಟ್ ಹಂಚಿಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗಿದ್ದಲ್ಲ, 20 ವರ್ಷಗಳ ಹಿಂದೆ ನಡೆದಿರುವುದು ಎಂದು ಹೇಳಿದ್ದಾರೆ.