ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮಂತ್ರಿಗಳು ನನ್ನ ಹೆದರಿಸುವ ಕೆಲಸ ಮಾಡುತ್ತಿದ್ದಾರೆ,ಅದಕ್ಕೆಲ್ಲ ಜಗ್ಗುವವ ನಾನಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ರಾಜ್ಯಪಾಲರು ಮುಡಾ ಹಗರಣ ವಿಚಾರಣೆಗೆ ಅನುಮತಿ ನೀಡಿದಾಕ್ಷಣ ಇಡೀ ಸಚಿವರು, ಶಾಸಕರನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಧಮ್ಕಿ ಹಾಕುವ, ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾನು ಹೀಗೆಲ್ಲಾ ಮಾಡಿಲ್ಲ, ನನ್ನ ವಿರುದ್ಧ ಆರೋಪ ಕೇಳಿಬಂದಾಗ ಒಬ್ಬನೇ ಎದುರಿಸುತ್ತೇನೆ ಎಂದು ಹೇಳಿದ್ದೆ, ವಿಧಾನಸಭೆ ಕಲಾಪದಲ್ಲಿಯೂ ಹೇಳಿದ್ದೇನೆ ಬೇಕಾದರೆ ಕಡತ ತೆಗೆದು ನೋಡಬಹುದು ಎಂದು ಹೇಳಿದರು.
ನನ್ನ ವಿರುದ್ಧ 2006ರಲ್ಲಿ ಗಣಿ ಆರೋಪ ಮಾಡಿದಾಗ ನಾನೊಬ್ಬನೇ ಎದುರಿಸಿದ್ದೆ, ಶಾಸಕರು, ಸಚಿವರನ್ನು ಅಡ್ಡ ಇಟ್ಟುಕೊಂಡು ರಕ್ಷಣೆ ಪಡೆಯುವ ಕೆಲಸ ಮಾಡಲಿಲ್ಲ ಎಂದು ಹೆಚ್ ಡಿ ಕೆ ಟಾಂಗ್ ನೀಡಿದರು.
ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿರುದ್ಧ ಅತ್ಯಂತ ಕೆಟ್ಟದಾಗಿ, ಅವಹೇಳನಕಾರಿಯಾಗಿ ಪ್ರತಿಭಟನೆ ಮಾಡಿಸುತ್ತಿದೆ. ಸಚಿವರು, ಶಾಸಕರು ರಾಜ್ಯಪಾಲರ ಬಗ್ಗೆ ಬಹಳ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ,ಬೇರೆ ಯಾವ ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿಯನ್ನು ನಾನು ನೋಡಿಲ್ಲ ಎಂದು ಕಿಡಿಕಾರುದರು.
ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ಮೇಲೆ ಏಕೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲಾ ಎಂದು ಕೇಳುತ್ತಿದ್ದಾರೆ. 2006ರಲ್ಲಿ ನಾನು ಸಿಎಂ ಆದ ಎರಡೇ ತಿಂಗಳಿಗೆ ಗಣಿಗಾರಿಕೆ ಮಾಲೀಕರಿಂದ ಹಣ ಸಂಗ್ರಹ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು. ಅದರ ಬಗ್ಗೆ ಒಂದು ಸಿಡಿ ಮಾಡಲು ಸಿಡಿ ಶಿವು ಪ್ರಯತ್ನ ಮಾಡಿದ್ದರು. ವಿಧಾನಸಭೆ ಕಲಾಪಕ್ಕೆ ಬಂದು ಆಪರೇಷನ್ ಸಕ್ಸಸ್ ಎಂದು ಹೇಳಿದ್ದರು. ನನ್ನ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು, ಸಿದ್ದರಾಮಯ್ಯ ನವರಿಗೆ ಇದು ನೆನಪಿದೆಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಯಾರೋ ಒಬ್ಬರು ಸಿದ್ದರಾಮಯ್ಯನವರ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕುತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಡೇಂಜರ್. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ ಎಂದು ಪರೋಕ್ಷವಾಗಿ ಡಿಕೆಶಿ ಗೆ ಟಾಂಗ್ ಕೊಟ್ಟರು.
ದೇವೇಗೌಡರು, ಕುಮಾರಸ್ವಾಮಿ ಅವರು ಹಟ ಹಿಡಿದು ಮೋದಿ, ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ರಾಜ್ಯಪಾಲರಿಂದ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೇನು ಬೇರೆ ಕೆಲಸ ಇಲ್ಲವಾ ಅವರ ಪಕ್ಷದಲ್ಲಿನ ಪಿತೂರಿಗೆ ಸಿದ್ದರಾಮಯ್ಯ ಬಲಿಯಾಗುತ್ತಿದ್ದಾರೆ ಇದು ಅವರಿಗೆ ಗೊತ್ತಿರಲಿ ಎಂದು ಕುಮಾರಸ್ವಾಮಿ ಮತ್ತೆ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳೇ ಇಲ್ಲಾ,ಅವರು ರಾಜೀನಾಮೆ ಕೊಡುವುದೂ ಇಲ್ಲ, ಅದು ನನಗೆ ಗೊತ್ತಿದೆ,ಕಾನೂನು ಇದೆಯಲ್ಲಾ ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತೆ ಎಂದು ಕುಮಾರಸ್ವಾಮಿ ಹೇಳಿದರು.