ಮೈಸೂರು: ನಮ್ಮ ರಾಮಾಯಣ ಭಾರತದ ಕಣ್ಣು,ಪ್ರಭು ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನುಡಿದರು.
ದತ್ತ ಪೀಠದ ಆವರಣದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆಗಸ್ಟ್ 8 ರಿಂದ ಪ್ರಾರಂಭವಾಗಿದ್ದ ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಮಹಾ ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡು ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಒಮ್ಮೆಯಾದರೂ ರಾಮಾಯಣ ಪಾರಾಯಣ ಮಾಡಬೇಕು ಎಂದು ತಿಳಿಸಿದ ಶ್ರೀಗಳು, ಭಾರತ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಶ್ರೀರಾಮ ಎಂಬ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ ಎಂದು ಹೇಳಿದರು.
ಲೋಕಕಲ್ಯಾಣಾರ್ಥವಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಿ 11 ದಿನಗಳಿಂದ ಸಂಪೂರ್ಣ ರಾಮಾಯಣ ಪಾರಾಯಣ ಮಾಡಲಾಗಿದೆ,ನಮ್ಮ ಕರ್ನಾಟಕ,ನಮ್ಮ ದೇಶ ಹಾಗೂ ವಿಶ್ವದೆಲ್ಲೆಡೆ ಸದಾ ಶಾಂತಿ ಇರಬೇಕು ಎಂದು ಪ್ರಾರ್ಥಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಎಲ್ಲೆಡೆ ಕಷ್ಟದ ವಾತಾವರಣ,ಯುದ್ಧದ ವಾತಾವರಣ ಕಾಡುತ್ತಿದೆ ಇದೆಲ್ಲ ಹೋಗಬೇಕೆಂದು ಸಂಕಲ್ಪ ಮಾಡಲಾಗಿದೆ,
ಶ್ರೀ ರಾಮ ಸೀತಾ ಮಾತಾ,ಆಂಜನೇಯ ಸ್ವಾಮಿ ಎಲ್ಲರಿಗೂ ಅನುಗ್ರಹ ನೀಡಲಿ ಎಂದು ಶ್ರೀಗಳು ಹಾರೈಸಿದರು. ಇದೇ ವೇಳೆ ದತ್ತ ಯಾಗ ಮಹಾ ಪೂರ್ಣಾವತಿ ಕೂಡ ಇಂದೇ ಆಗಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಇಡೀ ನಾಡಿನಲ್ಲಿ ಕೊರೊನಾ ಬಾಧಿಸುತ್ತಿದ್ದಾಗ ರಾಮಾಯಣ ಪಾರಾಯಣ ಮಾಡಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಅಂದುಕೊಂಡಿದ್ದರು.
ಪ್ರಾರಂಭದಲ್ಲಿ ಕೆಲ ವಿಘ್ನಗಳು ಬರಲಿದೆ ಎಂದು ಕೂಡ ಶ್ರೀಗಳು ತಿಳಿಸಿದ್ದರು, ನಾನು ಒಳಗೆ ರಾಮಾಯಣ ಪಾರಾಯಣ ಮಾಡಿಕೊಳ್ಳುತ್ತೇನೆ ನೀವು ಮುಂದೆ ಮಾಡಿ ಎಲ್ಲಾ ಸರಿಯಾಗಲಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರಾಮಾಯಣ ಪಾರಾಯಣ ಆಗಿದೆ ಇದಕ್ಕೆ ಈ ಎಲ್ಲ ಹೃತ್ವಿಕರು ಮುಖ್ಯ ಕಾರಣ ಎಂದು ತಿಳಿಸಿದರು.
ಹಿಂದೆ ಶತಶ್ಲೋಕಿ ರಾಮಾಯಣದಿಂದಲೇ ಶಾಲೆಗಳಲ್ಲಿ ನಮ್ಮ ಪಾಠಗಳು ಪ್ರಾರಂಭ ಆಗುತ್ತಿದ್ದವು ಎಂದು ಸ್ಮರಿಸಿದ ಶ್ರೀಗಳು ವೇದ ಓದಿದವರು ರಾಮಾಯಣ ಗೊತ್ತಿಲ್ಲ ಎಂದರೆ ಚೆನ್ನಾಗಿರುವುದಿಲ್ಲ ನಮ್ಮ ರಾಮಾಯಣ ಭಾರತದ ಕಣ್ಣು ಇದ್ದಂತೆ ಎಲ್ಲರೂ ಒಮೆಯಾದರು ರಾಮಾಯಣ ಓದಬೇಕು ಅದರಲ್ಲಿನ ಸಾರವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಲ್ಲಿಗೆ ರಾಮಾಯಣ ಪಾರಾಯಣ ಹಾಗೂ ಶ್ರೀ ಮದ್ರಾಮಾಯಣ ಯಾಗ ಎರಡೂ ಯಶಸ್ವಿಯಾಗಿದೆ, 24,000 ಆಹುತಿಗಳನ್ನು ಸಮರ್ಪಣೆ ಮಾಡಲಾಗಿದೆ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು 52 ಲಕ್ಷ ಪೂರ್ತಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮಾಯಣವನ್ನು ಅಚ್ಚುಕಟ್ಟಾಗಿ ನಮ್ಮ ಆಶ್ರಮದ ವೇದ ಶಾಲೆಯ ಉಪಾಧ್ಯಾಯರು ವಿದ್ಯಾರ್ಥಿಗಳು ಓದಿದ್ದಾರೆ, ಶ್ರೀ ವಂಶಿಕೃಷ್ಣ ಘನಪಾಠಿ ಅವರು ಇವೆಲ್ಲದಕ್ಕೂ ಆಧಾರಸಂಭವಾಗಿ ನಿಂತರು ಎಂದು ಎಲ್ಲರನ್ನು ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.
ಅಯೋಧ್ಯೆಯಲ್ಲಿ ಅಪ್ಪಾಜಿಯವರ ಸಮ್ಮುಖದಲ್ಲಿ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು ಎಂಬ ಆಸೆ ಇದೆ ಅಲ್ಲಿ ನಮ್ಮ ಆಶ್ರಮದ ಶಾಖೆ ಕಟ್ಟಲಾಗುತ್ತಿದೆ ಅದು ಪೂರ್ಣಗೊಂಡ ತಕ್ಷಣ ಅಲ್ಲಿ ರಾಮಾಯಣ ಪಾರಾಯಣ ಮಾಡೋಣ ಎಂದು ಇದೇ ವೇಳೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿಶ್ವಾಸದಿಂದ ನುಡಿದರು.ಬೆಳಿಗ್ಗೆ ಆಶ್ರಮದ ಪ್ರಾರ್ಥನಾ ಮಂದಿರದಿಂದ ಸೀತಾರಾಮ ಆಂಜನೇಯ ಸಮೇತ ಉತ್ಸವ ಮೂರ್ತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿ ವರೆಗೆ ತರಲಾಯಿತು ಶ್ರೀಗಳು ಈ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.