ಕೋಲ್ಕತ್ತಾ: ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸರ್ವೋಚ್ಛ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಆರ್ ಜಿ ಕರ್ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದೆ.
ಈ ಕುರಿತು ನಡೆದ ವಿಚಾರಣೆಯ ಸಂದರ್ಭದಲ್ಲಿ,ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೀಕರ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಬೆಳಗ್ಗೆ ಅಪರಾಧ ಗೊತ್ತಾಗಿದೆ ಎಂದು ತೋರುತ್ತಿದೆ, ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು, ತಡರಾತ್ರಿಯವರೆಗೂ ಏಕೆ ಎಫ್‌ಐಆರ್ ದಾಖಲಾಗಲಿಲ್ಲ ಎಂದು ಡಿ ವೈ ಚಂದ್ರಚೂಡ್ ಅವರ ಪೀಠ ಪ್ರಶ್ನಿಸಿದೆ.
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಕೃತ್ಯಗಳು ಮತ್ತು ಕಳೆದ ಗುರುವಾರ ತಡರಾತ್ರಿ ಅಪರಾಧದ ಸ್ಥಳವನ್ನು ಬದಲಾಯಿಸುವ ಪ್ರಯತ್ನಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಅನುಮಾನಗಳನ್ನು ವ್ಯಕ್ತಪಡಿಸಿದೆ.
ಸಂತ್ರಸ್ತೆಯ ಗುರುತು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿರುವುದನ್ನು ನೋಡುವುದು ನೋವಿನ ಸಂಗತಿ. ಇದು ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ, ದೇಶಾದ್ಯಂತ ವೈದ್ಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಪ್ರಕಟಿಸಿತು.
ವೈದ್ಯರಿಗೆ ಸುರಕ್ಷತೆ ಒದಗಿಸುವುದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯ, ಪರಿಸ್ಥಿತಿಯ ಬದಲಾವಣೆಗಾಗಿ ರಾಷ್ಟ್ರವು ಮತ್ತೊಂದು ಅತ್ಯಾಚಾರ ಅಥವಾ ಕೊಲೆಗಾಗಿ ಕಾಯಲು ಸಾಧ್ಯವಿಲ್ಲ, ಆಗಸ್ಟ್ 22 ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸಬೇಕೆಂದು ಸಿಬಿಐಗೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.