ಗಜ ಪಯಣಕ್ಕೆ ವಿದ್ಯುಕ್ತ ಚಾಲನೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜ ಪಯಣ ವಿದ್ಯುಕ್ತವಾಗಿ ಪ್ರಾರಂಭವಾಯಿತು.

ನಾಗರಹೊಳೆಯ ವೀರನಹೊಸಹಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ 9 ಗಜಗಳ ಪಡೆಗೆ ಮೈಸೂರು ಅರಮನೆ ಪುರೋಹಿತರು ಬುಧವಾರ ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸಿದರು.ಈ ಮೂಲಕ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಸಾಂಪ್ರದಾಯಿಕ ವಾಗಿ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ಒಟ್ಟು ಒಂಭತ್ತು ಆನೆಗಳು ಗಜಪಯಣದ ಮೂಲಕ ಮೈಸೂರಿಗೆ ತೆರಳುತ್ತಿದ್ದು, ವಿಶ್ವ ವಿಖ್ಯಾತ 414 ನೇ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಯಲ್ಲಿ ಭಾಗವಹಿಸಲಿವೆ.

ಈ ಬಾರಿ ನಾಡ ಹಬ್ಬ ದಸರಾದಲ್ಲಿ ಒಟ್ಟು 14 ಆನೆಗಳು ಭಾಗವಹಿಸಲಿವೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಹಾಗೂ 2ನೇ ಹಂತದಲ್ಲಿ 5 ಆನೆಗಳು ಮೈಸೂರಿಗೆ ಆಗಮಿಸಲಿವೆ.

ಅಲ್ಲದೆ ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಕೂಡಾ ಆಯ್ಕೆ ಮಾಡಲಾಗಿದ್ದು, ಅಗತ್ಯ ಬಂದರೆ ಮೀಸಲು ಆನೆಗಳನ್ನ ಬಳಸಿಕೊಳ್ಳಲು ಇಲಾಖೆ ತೀರ್ಮಾನಿಸಿದೆ.

ಆಗಸ್ಟ್‌ 23 ರಂದು ಈ 9 ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳಲಾಗುವುದು. ಆಗಸ್ಟ್ 21 ರಿಂದ 23ರ ವರೆಗೆ ಅಂದ್ರೆ 2 ದಿನಗಳ ಕಾಲ 9 ಆನೆಗಳು ಮೈಸೂರಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೊಡಲಿವೆ.

ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್‌ (25), ರೋಹಿಣಿ (22), ಲಕ್ಷ್ಮೀ (53), ವರಲಕ್ಷ್ಮಿ (67), ಏಕಲವ್ಯ (38) ಆನೆಗಳು ಮೊದಲ ಗಜಪಯಣದಲ್ಲಿ ಮೈಸೂರಿಗೆ ಆಗಮಿಸಲಿವೆ

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ‌ ಈಶ್ವರ ಖಂಡ್ರೆ,ಸಚಿವ ವೆಂಕಟೇಶ್, ಶಾಸಕ‌ರಾದ‌ ಅನಿಲ್ ಚಿಕ್ಕಮಾದು,ಹರೀಶ್ ಗೌಡ, ಸಂಸದ ಸುನಿಲ್ ಬೋಸ್,ಎಸ್ ಪಿ ವಿಷ್ಣುವರ್ಧನ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.