ಮೈಸೂರು: ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109ನೇ ಜಯಂತಿ ಮಹೋತ್ಸವವನ್ನು ಆ. 25ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ. ಮಂಜುನಾಥ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,
ಆ.25 ರ ಬೆಳಿಗ್ಗೆ 10.30ಕ್ಕೆ ನಗರದ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮಹೋತ್ಸವ ನಡೆಯಲಿದೆ ಎಂದು ಹೇಳಿದರು.
ಈ ಸಮಾರಂಭವು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ನೇತಾರ ಮಧುಸೂದನ ಸಾಯಿ ಅವರ ದಿವ್ಯ ಸಮ್ಮುಖದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಗೋವಾದ ರಾಜ್ಯಪಾಲ ಪಿ. ಎಸ್ ಶ್ರೀಧರನ್ ಪಿಳ್ಳೈ ಅವರು ನೆರವೇರಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ. ಎಚ್ ವಿಜಯ ಶಂಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಅದೇ ದಿನ ಮಧ್ಯಾಹ್ನ 3 ಗಂಟೆ ಗೆ ಜೆಎಸ್ಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ 102 ಮಂದಿ ಹಾಗೂ ಸೇವೆಯಿಂದ ಬಿಡುಗಡೆ ಪಡೆದಿರುವ 63 ಮಂದಿಯನ್ನು ಅಭಿನಂದಿಸಲಾಗುವುದು ಎಂದು ಡಾ. ಮಂಜುನಾಥ್ ತಿಳಿಸಿದರು.
ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಹಾಗೂ ಬಹುಮಾನ ವಿತರಣೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.
ಜಯಂತಿಯ ಅಂಗವಾಗಿ ಮೈಸೂರಿನ ಮೃಗಾಲಯದ ಪ್ರಾಣಿ ಸಂಕುಲಕ್ಕೆ ಆಹಾರ ವಿತರಣೆ ಮಾಡಲು ಒಂದು ಲಕ್ಷ ರೂಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜೆಎಸ್ಎಸ್ ಆಸ್ಪತ್ರೆಯ ಮಾಹಿತಿ ಕೇಂದ್ರ ಘಟಕದಲ್ಲಿ ನೇತ್ರ, ರಕ್ತ, ಅಂಗಗಳು ಹಾಗೂ ದೇಹ ದಾನ ಬಗ್ಗೆ ಮಾಹಿತಿ ನೀಡಲು ನೊಂದಣಿ ಮಾಡಿಕೊಳ್ಳಲಾಗುವುದು ಎಂದು ಮಂಜುನಾಥ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಸ್ವಾಮಿಗಳು, ಮೊರಬದ ಮಲ್ಲಿಕಾರ್ಜುನ ಹಾಗೂ ಸುರೇಶ್ ಅವರುಗಳು ಉಪಸ್ಥಿತರಿದ್ದರು.