ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ಹಂತದ ಗಜಪಡೆಯನ್ನು ಅರಮನೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ದಸರಾ ಗಜಪಡೆಯ ಆಗಮನದಿಂದ ಸಾಂಸ್ಕೃತಿಕ ನಗರಿಯಲ್ಲಿ ಈಗಾಗಲೇ ಹಬ್ಬದ ವೈಭವ ಕಳೆಗಟ್ಟಿದೆ.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಬೆಳಗ್ಗೆ 10.10 ರಿಂದ 10.30 ರ ಶುಭಗಳಿಗೆಯಲ್ಲಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ಮೈಸೂರಿನ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9
ಆನೆಗಳಿಗೆ ಇಲಾಖೆ ವತಿಯಿಂದ ಪುಜೆ ಸಲ್ಲಿಸಿ ಬೀಳ್ಕೊಡಲಾಯಿತು,
ನಂತರ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಅರಮನೆಗೆ ಗಜಪಡೆ ಆಗಮಿಸಿತು.
ಅಭಿಮನ್ಯು,ಏಕಲವ್ಯ, ಭೀಮ, ಕಂಜನ್, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ ಆನೆಗಳು ಅರಮನೆಗೆ ಆಗಮಿಸಿದ್ದು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರಾಜ ಬೀದಿಗಳಲ್ಲಿ ಸಾಗಿ ಬಂದ ದಸರಾ ಗಜಪಡೆ ಕಣ್ತುಂಬಿಕೊಳ್ಳಲು ಮೈಸೂರಿಗರು ಮುಗಿ ಬಿದ್ದುದು ಕಂಡುಬಂದಿತು.
ಗಜಪಡೆ ಆಗಮನದ ವೇಳೆ ಶಾಸಕರಾದ ತನ್ವೀರ್ ಸೇಠ್, ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸಾ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ, ಎಸ್ ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.