ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವ ಕಳೆಗಟ್ಟಲಾರಂಭಿಸಿರುವಾಗಲೇ ಮೈಸೂರಿನಲ್ಲಿ ಭಾರಿ ಸ್ಫೋಟಕ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿ ಸಮೀಪದ ಹೋಟೆಲ್ ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.
ದುಷ್ಕರ್ಮಿಗಳು ನೀಲಿ ಬಣ್ಣದ ಬ್ಯಾಗ್ ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಫೋಟಕ ವಸ್ತುಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಸಿಬ್ಬಂದಿ ಧಾವಿಸಿ ಸ್ಫೋಟಕಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಟ್ಯೂಬ್ ಆಕಾರದಲ್ಲಿರುವ 9 ಸ್ಫೋಟಕಗಳು ಹಾಗೂ ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ.
ವಿಶ್ವ ವಿಖ್ಯಾತ ದಸರಾ ಮಹೋತ್ಸವ ಕಳೆಗಟ್ಟಲಾರಂಭವಾದ ಹೊತ್ತಲ್ಲೇ ಸ್ಫೋಟಕ ಪತ್ತೆಯಾಗಿರುವುದು ಮೈಸೂರಿಗರಲ್ಲಿ ಆತಂಕ ಸೃಷ್ಟಿಸಿದೆ.