ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ ಎತ್ತಿ ಹಿಡಿಯುತ್ತೇನೆ -ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್

ಮೈಸೂರು:ಮೇಘಾಲಯ  ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅವರನ್ನು ಶ್ರೀ ‌ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಕಿರಿಯ ಶ್ರೀಗಳಾದ ಶ್ರೀ ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಾಗರೀಕ ಅಭಿನಂದನಾ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ. ಎಚ್ ವಿಜಯಶಂಕರ್ ಅವರು ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ. ನಮ್ಮ ನಾಡಿನ ಹಿರಿಮೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.

ನಾನು ರಾಜಪಾಲನಾಗಿರುವುದು ಮೇಘಾಲಯಕ್ಕೆ. ಅಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ. ಮಹಿಳೆಯೇ ಮನೆಯ ಯಜಮಾನಿ, ಅಂತಹ ಉತ್ತಮವಾದ ಗೌರವ ಸ್ಥಾನ ಮಹಿಳೆಯರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಚಾರ ವಿಚಾರ ಎಲ್ಲದರಲ್ಲೂ ಮೇಘಾಲಯ ಮುಂದಿದೆ ನಮ್ಮ ರಾಜ್ಯದಿಂದ ವಿದ್ಯಾರ್ಥಿಗಳು ನಾಡಿನ ಜನರು ಮೇಘಾಲಯಕ್ಕೆ ಬರಬೇಕೆಂದು ಆಹ್ವಾನಿಸಿದರು.

ಮೇಘಾಲಯದಲ್ಲಿ ಮತ್ತೊಂದು ವಿಶೇಷವೆಂದರೆ ಅಲ್ಲಿ ಮನೆಯ ಮಗಳಿಗೆ ಪಿತ್ರಾರ್ಜಿತ ಆಸ್ತಿ ಹೋಗುತ್ತದೆ ಅಂತಹ ಒಂದು ಒಳ್ಳೆಯ ಕಾನೂನು ಅಲ್ಲಿರುವುದು ವಿಶೇಷ ಎಂದು ತಿಳಿಸಿದರು.

ನಮ್ಮ ನಾಡಿನ ಗೌರವಕ್ಕೆ ಚ್ಯುತಿ ತರುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ನನಗೆ ಜನ್ಮ ಜನ್ಮದ ಪುಣ್ಯ ಅಲ್ಲಿನ ರಾಜ್ಯಪಾಲ ಹುದ್ದೆ ಸಿಕ್ಕಿದೆ, ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತೇನೆ ನಮ್ಮ ನಾಡಿನ ಋಣವನ್ನು ತೀರಿಸುವಂತಹ ಕೆಲಸ ಮಾಡುತ್ತೇನೆ ಎಂದು ಸಿ ಎಚ್ ವಿಜಯಶಂಕರ್ ತಿಳಿಸಿದರು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ,

ರಾಜ್ಯಪಾಲರ ಹುದ್ದೆ ಸುಲಭವಾದುದಲ್ಲ. ಅದು ಜಟಿಲ, ಕೇವಲ ಸಹಿ ಹಾಕುವುದಲ್ಲ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಸ್ವಾಮೀಜಿಯವರು ಸಲಹೆ ನೀಡಿದರು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹೇಳಿರುವುದು ನಿಜ. ಅದರಂತೆ ಸಾಂವಿಧಾನಿಕ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಮೈಸೂರಿಗೆ ಮತ್ತು ಕರ್ನಾಟಕಕ್ಕೆ ಇನ್ನೂ ಹೆಚ್ಚು ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಹಾರೈಸಿದರು.

ರಾಜ್ಯಪಾಲರಾಗಿ ರಾಜಭವನ ಪ್ರವೇಶಿಸಿದ ಕೂಡಲೇ ರಾಜಭವನದಲ್ಲಿ ಇನ್ನು ಮುಂದೆ ಮಧ್ಯ,ಮಾಂಸ ಸೇವನೆ ಇರುವುದಿಲ್ಲ ಎಂದು ವಿಜಯಶಂಕರ್ ಅವರು ಹೇಳಿ ಅದನ್ನು ಆಚರಣೆಗೆ ತರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.ಆದರೆ ಆಹಾರ ಪದ್ಧತಿ ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಅವರ ಪದ್ಧತಿಯನ್ನು ಇಂಪ್ಲಿಮೆಂಟ್ ಮಾಡುತ್ತಿರುವುದು ಅವರ ಧೈರ್ಯಕ್ಕೆ ಮೆಚ್ಚುಗೆ ಇರಬೇಕು ಎಂದು ಶ್ರೀಗಳು ಹೇಳಿದರು.

ಬಿಜೆಪಿ ಮುಖಂಡ, ಮಾಜಿ ಶಾಸಕ ಮಾರುತಿರಾವ್ ಪವಾರ್ ಗಣ್ಯರಿಗೆ ಸ್ವಾಗತ ಕೋರಿದರು. ಮಾಜಿ‌ ಶಾಸಕ ವೈ.ಎಸ್.ವಿ ದತ್ತ‌  ಅಭಿನಂದನಾ ನುಡಿ ಆಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ಸಾಹಿತಿ,ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ‌ ಎಸ್.ಎಲ್.ಭೈರಪ್ಪ, ಮತ್ತೊಬ್ಬ ಹಿರಿಯ ಸಾಹಿತಿ ಪ್ರಧಾನ್ ಗುರುದತ್ತ, ಶಾಸಕರಾದ ಶ್ರೀವತ್ಸ, ತನ್ವೀರ್‌ಸೇಠ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.