ಮೈಸೂರು: ಈ ಬಾರಿಯ ದಸರಾದಲ್ಲಿ ಭಾಗವಹಿಸಲಿರುವ ಗಜಪಡೆಗೆ ಇಂದಿನಿಂದ ತಾಲಿಮು ಆರಂಭಿಸಲಾಗಿದೆ.
ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭಿಸಲಾಗಿದ್ದು ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಆನೆಗಳು ಸಾಗಿ ಬಂದವು.
ಈ ವೇಳೆ ಸಾರ್ವಜನಿಕರು ಆನೆಗಳನ್ನು ಕಂಡು ಫೋಟೋ ಕ್ಲಿಕ್ಕಿಸುತ್ತಿದ್ದು ಕಂಡುಬಂದಿತು.ಗಜಪಡೆ ಕಂಡು ಜನರು ಸಂಭ್ರಮಿಸಿದರು.
ಕ್ಯಾಪ್ಟನ್ ಅಭಿಮನ್ಯು, ವರಲಕ್ಷ್ಮಿ, ಭೀಮ, ಏಕಲವ್ಯ, ಲಕ್ಷ್ಮಿ, ರೋಹಿತ್, ಗೋಪಿ, ಕಂಜನ್, ಧನಂಜಯ ಆನೆಗಳು ಇಂದು ಬೆಳಿಗ್ಗೆ ಮೈಸೂರು ಅರಮನೆಯಿಂದ ಹೊರಟು ಕೆಆರ್ ಸರ್ಕಲ್, ಆಯುರ್ವೇದ ಆಸ್ಪತ್ರೆ ವೃತ್ತ, ನಂತರ ಬನ್ನಿಮಂಟಪವನ್ನು ತಲುಪಿದವು.
ಅರಮನೆಯಿಂದ 3.5 ಕಿಲೋಮೀಟರ್ ದೂರವಿರುವ ಬನ್ನಿಮಂಟಪಕ್ಕೆ ಗಜಪಡೆ ಸಾಗಿ, ನಂತರ ಅದೇ ಮಾರ್ಗವಾಗಿ ಅರಮನೆಗೆ ವಾಪಸ್ ಆದವು.
ಈ ಬಾರಿ ಗಜಪಡೆ ಮೇಲೆ ತೀವ್ರ ನಿಗಾ ಇಡುವ ನಿಟ್ಟಿನಲ್ಲಿ ಆಪ್ ಅನ್ನು ಸಿದ್ಧಪಡಿಸಲಾಗಿದ್ದು ಆನೆಗಳ ಚಲನ ವಲನ ಆರೋಗ್ಯ ಸ್ಥಿತಿ ಎಲ್ಲವನ್ನು ಆಪ್ ಮೂಲಕ ಗಮನಿಸಲಾಗುತ್ತದೆ.
ದಸರಾ ಆನೆಗಳು ಪ್ರತಿದಿನ ಯಾವ ಮಾರ್ಗದಲ್ಲಿ ತೆರಳಿತು ಹಾಗೂ ಅವುಗಳ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕುವಂತಹ ಆಪ್ ಇದಾಗಿದೆ.