ಮತದಾನದ ವೇಳೆಯೇ ಜೆಡಿಎಸ್ ಸದಸ್ಯರಿಗೆ ಹಣದ ಆಮಿಷ: ಗಣಿಗ ರವಿ ವಿರುದ್ಧ ‌ಹೆಚ್ ಡಿ ಕೆ ಆರೋಪ

ಮಂಡ್ಯ: ಮಂಡ್ಯ ನಗರಸಭೆ ಚುನಾವಣೆ ಮತದಾನದ ವೇಳೆಯೇ ಚುನಾವಣಾಧಿಕಾರಿ ಸಮ್ಮುಖದಲ್ಲೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ‌ ಗಂಭೀರ ಆರೋಪ ಮಾಡಿದರು.

ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಹೆಚ್ ಡಿ ಕೆ, ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದರು ಎಂದು ಶಾಸಕ ಗಣಿಗ ರವಿ ವಿರುದ್ಧ ದೂರಿದರು.

ವಾಮಮಾರ್ಗದಲ್ಲಿ ಜೆಡಿಎಸ್ ಬಿಜೆಪಿ ಅಧಿಕಾರ ಹಿಡಿದವು ಎಂದು ಶಾಸಕ ಗಣಿಗ ರವಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ಶಾಸಕರ ಪ್ರಕಾರ ವಾಮಮಾರ್ಗ ಅಂದರೆ ಅರ್ಥವೇನು ಮತದಾನದ ವೇಳೆಯೂ ಕಣ್ಸನ್ನೇ, ಕೈಸನ್ನೇ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮೀಷ ಒಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು,ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೆ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಚಿವ ಪ್ರಿಯಾಂಕ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು, ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ವ್ಯಂಗ್ಯ ವಾಡಿದರು.

ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು, ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು

ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ, ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು,ಕೆಐಎಡಿಬಿ ಜಾಗವೇ ಬೇಕಿತ್ತಾ, ಇದು ಅಧಿಕಾರ ದುರಪಯೋಗ ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರು 30ನೇ ತಾರೀಖು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ, ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ ಎಂದು ಹೆಚ್ ಡಿ ಕೆ ವ್ಯಂಗ್ಯವಾಡಿದರು.