ಬಳ್ಳಾರಿ ಜೈಲು ಸೇರಿದ ದರ್ಶನ್:ದಾಸನ ನೋಡಲು ಮುಗಿಬಿದ್ದ ಅಭಿಮಾನಿಗಳು

ಬಳ್ಳಾರಿ: ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ನಟ ದರ್ಶನ್ ಕೊನೆಗೂ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರು ಬಳ್ಳಾರಿ ಕೇಂದ್ರ ಕಾರಾಗೃಹವನ್ನು ಸಾಮಾನ್ಯ ಕೈದಿಯಂತೆ ಪ್ರವೇಶಿಸಿದರು.

ಕಪ್ಪು ಟೀ ಶರ್ಟ್ ತೊಟ್ಟು, ಎಡಗೈಗೆ ಕ್ರೇಪ್ ಬ್ಯಾಂಡ್ ಧರಿಸಿ ಬೆಡ್ ಶೀಟ್ , ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದುಕೊಂಡು ದರ್ಶನ್ ಜೈಲಿನೊಳಗೆ ಪ್ರವೇಶಿಸಿದರು.

ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಹೋಗಲಾಯಿತು. ಸುಮಾರು ಐದೂವರೆ ಗಂಟೆಗಳ ಪ್ರಯಾಣದ ಬಳಿಕ ಅವರು ಬಳ್ಳಾರಿ ಜೈಲು ತಲುಪಿದ್ದಾರೆ.

ಬಳ್ಳಾರಿ ಕಾರಾಗೃಹದ ಸೆಲ್ ನಂಬರ್ 15ರಲ್ಲಿ ಅವರನ್ನು ಇಡಲಾಗುತ್ತಿದೆ.

ದರ್ಶನ್ ಅಪರಾಧ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ,ನ್ಯಾಯಾಲಯ ನಿರ್ಧರಿಸುತ್ತದೆ. ನಮ್ಮ ಪಾಲಿಗೆ ಆತ ಹೀರೋ,ಅವರು ಎಂದಿಗೂ ಚಾಲೆಂಜಿಂಗ್ ಸ್ಟಾರ್ ಎಂದು ಈ ವೇಳೆ ಅಭಿಮಾನಿಗಳು ಹೇಳುತ್ತಿದ್ದುದು‌ ಕಂಡುಬಂದಿತು.

ಜೈಲಿನ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ಡಿ ಬಾಸ್‌, ಡಿ ಬಾಸ್‌ ಎಂದು
ನಟ ದರ್ಶನ್ ಗೆ ಜೈಕಾರ ಕೂಗುತ್ತಿದ್ದರು.

ಸಾಕಷ್ಟು ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತಲ್ಲದೆ,ದರ್ಶನ್ ನೋಡಲು ಮುಗಿಬಿದ್ದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅಭಿಮಾನಿಗಳನ್ನು ಚದುರಿಸಬೇಕಾಯಿತು.