ಹುಬ್ಬಳ್ಳಿ: ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ಶಾಸಕರು ದುಡ್ಡಿನ ಆಸೆಗೆ ಎಂದೂ ಬಲಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭವಲ್ಲ ಎಂದು ಕಡಕ್ಕಾಗಿ ಹೇಳಿದರು.
ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ಗೆ ಬಿಜೆಪಿಯವರು ಕೈಹಾಕಿದ್ದಾರೆಯೇ ಎಂಬ ಪ್ರಶ್ನೆಗೆ, ಬಿಜೆಪಿಯವರು ಹಾಗೆ ಪ್ರಯತ್ನಿಸುತ್ತಿರುವುದು ನಿಜ ಎಂದು ಶಾಸಕ ಗಣಿಗ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಬಿಜೆಪಿಯವರು ಎಂದಿಗೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ 2008, 2018 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ, ಬಿಜೆಪಿಯವರು ,ಇಂತಹ ಪ್ರಯತ್ನಕ್ಕೆ ಈಗಲೂ ಕೈಹಾಕಿದ್ದು,136 ಶಾಸಕರಿರುವ ನಮ್ಮ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭದ ಮಾತಲ್ಲ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಎರಡೂ ಸೇರಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಅವರು ರಾಜಿನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ವಿಜಯೇಂದ್ರ ತಿಳಿಸಿದರು ಅಂತಾ ರಾಜಿನಾಮೆ ನೀಡಲು ಸಾಧ್ಯವೇ ಎಂದು ಸಿಎಂ ಮರು ಪ್ರಸ್ನಿಸಿದರು.
ಶನಿವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ, ಆದೇಶವನ್ನು ನಿರೀಕ್ಷಿಸುತ್ತಿದ್ದೇವೆ, ನಾಳೆ ಸರ್ಕಾರದ ಎಲ್ಲ ಸಚಿವರು, ಎಂ ಎಲ್ ಎ ಗಳು, ಎಂಎಲ್ ಸಿ ಗಳು ರಾಜ್ಯಪಾಲರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ,ಜನಾರ್ಧನ ರೆಡ್ಡಿ, ನಿರಾಣಿ ಅವರುಗಳ ಮೇಲಿನ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು.
ಮಹಾದಾಯಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದವಿದೆ.ಆದರೆ ಕೇಂದ್ರದಿಂದ ಪರಿಸರ ತೀರುವಳಿ ನೀಡುವುದು ಬಾಕಿ ಇದ್ದು, ತೀರುವಳಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಡ ಮಾಜಿ ಆಯುಕ್ತರ ಮೇಲೆ ಆರೋಪವಿದ್ದರೂ ಅವರನ್ನು ಹಾವೇರಿ ವಿವಿಗೆ ಕುಲಸಚಿವರಾಗಿ ನೇಮಕ ಮಾಡಲಾಗಿದೆಯಲ್ಲ ಎಂಬ ಪ್ರಶ್ನೆಗೆ ಆ ವಿಚಾರದ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಸಿಎಂ ಹೇಳಿದರು.