ಮೈಸೂರು: ನಮ್ಮ ಧರ್ಮ ಅತ್ಯಂತ ಹಳೆಯದಾದ ಸನಾತನ ಧರ್ಮ, ನಮ್ಮ ಹಿಂದೂ ಧರ್ಮವನ್ನು ಉಳಿಸಲು ಮಕ್ಕಳು ಪಣ ತೊಡಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.
ಅವಧೂತ ದತ್ತಪೀಠದ ವತಿಯಿಂದ ನಡೆದ 10ನೇ ಕರ್ನಾಟಕ ರಾಜ್ಯ ಮಟ್ಟದ ಅಂತರಶಾಲಾ ಸಾಮೂಹಿಕ ಭಜನೆ ಸ್ಪರ್ಧೆಯ ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತರಿಗೆ ಮತ್ತು ರಾಜ್ಯಮಟ್ಟದ (ಫೈನಲ್ಸ್ ಅಂತಿಮ) ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಗಳು ಆಶೀರ್ವಚನ ನೀಡಿದರು.
ನಮ್ಮ ಧರ್ಮವನ್ನು ಬಿಟ್ಟು ಬೇರೆಡೆಗೆ ಹೋಗಬಾರದು ಹಾಗೆ ಹೋದರೆ ನಮ್ಮನ್ನು ನಾವು ಕೊಂದುಕೊಂಡಂತೆ ಎಂದು ಶ್ರೀಗಳು ಹೇಳಿದರು.
ಮಕ್ಕಳಿಂದ ಹಿಡಿದು ಮನೆಯ ಹಿರಿಯರು ಕೂಡ ಭಗವದ್ಗೀತೆ ಓದಬೇಕು,ಕೇಳಬೇಕು, ನಮ್ಮ ಭೂಮಿ ನಮ್ಮ ದೇಶವನ್ನು ಪ್ರೀತಿಸಬೇಕು ಬೇರೆ ದೇಶಗಳಲ್ಲಿ ಬದುಕುವುದು ಕಷ್ಟ ನಮ್ಮ ದೇಶದಲ್ಲೇ ಇದ್ದು ನಮ್ಮಲ್ಲಿ ಬೆಳೆದ ಅನ್ನವನ್ನು ತಿನ್ನಬೇಕು ಎಂದು ತಿಳಿ ಹೇಳಿದರು.
ಭಗವದ್ಗೀತೆಯಿಂದ ನಮ್ಮ ದೇಶ ನಮ್ಮ ಧರ್ಮವನ್ನು ಉಳಿಸಬಹುದು, ನಮ್ಮ ಧರ್ಮವನ್ನು ಉಳಿಸಿ ಬೆಳೆಸಿ, ದೇಶದ ಪ್ರಗತಿಗೆ ಶ್ರಮಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.ಪ
ಅಮೆರಿಕದಲ್ಲಿ ಶಾಲೆಯಲ್ಲೇ ಭಗವದ್ಗೀತೆ ಕಲಿಸುತ್ತಾರೆ, ಅಲ್ಲಿನ ಮಕ್ಕಳು ಭಗವದ್ಗೀತೆಯನ್ನು ಕಂಠಪಾಠ ಮಾಡಿದ್ದಾರೆ,ಭಗವದ್ಗೀತೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಭಗವದ್ಗೀತೆಯನ್ನು ಶಾಲೆಗಳಲ್ಲಿ ಪರಿಚಯ ಮಾಡಬೇಕು ಎಂದು ಶಿಕ್ಷಕರಿಗೆ ಇದೆ ವೇಳೆ ಶ್ರೀಗಳು ತಿಳಿಸಿದರು.
ಅಮೆರಿಕದಲ್ಲಿ ಮೂರು ವರ್ಷದ ಮಗು ಭಗವದ್ಗೀತೆಯನ್ನು ಕಂಠಪಾಠ ಮಾಡಿದೆ, ಅದೇ ರೀತಿ ನಾಲ್ಕು ವರ್ಷದ ಒಂದು ಮಗು ಸೌಂದರ್ಯ ಲಹರಿಯನ್ನು ಕಲಿತಿದೆ, ಮಾತು ಬಾರದ ಆಟಿಸಂ ಕಾಯಿಲೆ ಉಳ್ಳ ಮಗು ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಲಿತು ಹೇಳುತ್ತದೆ ನನಗೆ ಇದು ಅದ್ಭುತ ಎನಿಸುತ್ತದೆ ಇದಕ್ಕೆ ಭಗವದ್ಗೀತೆಯಲ್ಲಿರುವ ಶಕ್ತಿ ಕಾರಣ ದಯವಿಟ್ಟು ಎಲ್ಲರೂ ಭಗವದ್ಗೀತೆಯನ್ನು ಕೇಳಿ, ಕಲಿಯಿರಿ ಎಂದು ಮತ್ತೆ ಮತ್ತೆ ಸಚ್ಚಿದಾನಂದ ಸ್ವಾಮೀಜಿ ಉಚ್ಛರಿಸಿದರು.
ನಮ್ಮ ಆಶ್ರಮದ ವತಿಯಿಂದಲೇ ಆನ್ಲೈನ್ ಮೂಲಕ ಉಚಿತವಾಗಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ ಎಲ್ಲರೂ ಇದಕ್ಕೆ ನೋಂದಣಿ ಮಾಡಿಕೊಳ್ಳಿ ಎಂದು ಶ್ರೀಗಳು ಹೇಳಿದರು.
ಮಕ್ಕಳೇ ಯಾರೂ ಕೂಡ ಮೊಬೈಲ್ ಫೋನ್ ಗಳನ್ನು ನೋಡಬೇಡಿ ಅದನ್ನು ಮುಟ್ಟಲೂ ಬೇಡಿ ಇದರಿಂದ ಸಮಯ ಹಾಳು ಮನಸ್ಸು ಹಾಳು, ಜೀವನವೇ ನಾಶವಾಗಿ ಬಿಡುತ್ತದೆ ಈಗಲೇ ಇದನ್ನು ಬಿಟ್ಟುಬಿಡಿ, ತಂದೆ ತಾಯಿಗಳು ಕೂಡ ಮಕ್ಕಳಿಗೆ ಮೊಬೈಲ್ ಫೋನ್ ಕೊಟ್ಟು ಅಭ್ಯಾಸ ಮಾಡಬೇಡಿ ಎಂದು ಪದೇ ಪದೇ ಶ್ರೀಗಳು ತಿಳಿಸಿದರು.
ಡಾಕ್ಟರ್, ಇಂಜಿನಿಯರ್, ಟೀಚರ್ ಹೀಗೆ ನೀವು ಚೆನ್ನಾಗಿ ಓದಿ ಮುಂದೆ ಬಂದು ಜನಸೇವೆ ಮಾಡಬೇಕು ತಂದೆ, ತಾಯಿ, ಮತ್ತು ಶಿಕ್ಷಕರಿಗೆ, ನಾಡಿಗೆ ಕೀರ್ತಿ ತರಬೇಕು ಎಂದು ಶ್ರೀಗಳು ತಿಳಿಸಿದರು.
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ನಮ್ಮ ರೂಮನ್ನೇ ಬಿಟ್ಟುಕೊಟ್ಟುಬಿಡುತ್ತೇವೆ ಅದು ನಮ್ಮ ಅತಿಥಿ ಸತ್ಕಾರ. ಹಾಗೆಂದು ಇಡೀ ಮನೆಯನ್ನೇ ಬಿಟ್ಟುಕೊಡುವುದು ಸರಿಯಲ್ಲ ಈಗಾಗಲೇ ನಾವು ದೇಶವನ್ನೇ ಬಿಟ್ಟು ಬಿಟ್ಟಿದ್ದೇವೆ. ಹಿಂದೂ ಮಕ್ಕಳು ಹೆಚ್ಚಾಗಬೇಕು, ನಾವು ಹಿಂದುಗಳಾಗಿಯೇ ಉಳಿಯಬೇಕು ನಮ್ಮ ಧರ್ಮದಲ್ಲೇ ಮುಂದುವರಿಯಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹೆ ನೀಡಿದರು.
ಹೆಣ್ಣು ಮಕ್ಕಳು, ಮಹಿಳೆಯರು ಹಣೆಗೆ ಬೊಟ್ಟು ಇಟ್ಟುಕೊಳ್ಳುವುದನ್ನು ಮರೆಯಬಾರದು ಹೀಗೆ ಹಣೆಯಲ್ಲಿ ತಿಲಕ ಇಟ್ಟುಕೊಂಡರೆ ನಮ್ಮ ಮೆಮೊರಿ ಪವರ್ ಹೆಚ್ಚಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದು ಸ್ವಾಮೀಜಿ ತಿಳಿಸಿದರು.