ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ:ಪ್ರಮೋದಾದೇವಿ ವಿರೋಧ

ಮೈಸೂರು:ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ ಸಂಬಂಧ ಸರ್ಕಾರ ಮತ್ತು ರಾಜಮನೆತನ ನಡುವೆ ಜಟಾಪಟಿ ಮುಂದುವರೆದಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಧಿಕಾರ ರಚನೆ ಕುರಿತ ಸಭೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಚಾಮುಂಡಿ‌ ಬೆಟ್ಟದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸಭೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮೇಲ್ ಮೂಲಕ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ಪತ್ರ ಬರೆದು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.

ಅದಕ್ಕೆ ಮೇಲ್ ಮೂಲಕವೇ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ, ಕಾನೂನು ಉಲ್ಲಂಘನೆ ಆಗಲಿದೆ ಎಂದ ಸೂಕ್ಷ್ಮ ಎಚ್ಚರಿಕೆ ನೀಡಿದ್ದಾರೆ.

ಸೆ. 5ಕ್ಕೆ ನ್ಯಾಯಾಲಯದಲ್ಲಿ ಮುಂದುವರಿದ ವಿಚಾರಣೆ ಇದೆ, ಹೀಗಿರುವಾಗ ಸಭೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಮೋದಾದೇವಿ ಪ್ರಶ್ನೆ ಮಾಡಿದ್ದು, ಸಭೆಗೆ ಗೈರಾಗಲು ನಿರ್ಧಾರ ಮಾಡಿದ್ದಾರೆ.

ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರಮೋದಾ ದೇವಿ ಅವರು ಚಾಮುಂಡೇಶ್ವರಿ ಬೆಟ್ಟ ನಮ್ಮ ಆಸ್ತಿ ಎಂದು ಪ್ರತಿಪಾದಿಸಿದ್ದಾರೆ.