ರೇಣುಕಾಸ್ವಾಮಿ ಕೊಲೆ ಪ್ರಕರಣ:ಎರಡು ದಿನದಲ್ಲಿ ಚಾರ್ಜ್‌ ಶೀಟ್‌‌ ಸಲ್ಲಿಕೆ -ದಯಾನಂದ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ,ಇನ್ನೂ ಕೆಲವು ಎಫ್ ಎಸ್ ಎಲ್ ವರದಿಗಳು ಬರಬೇಕಿದೆ ಎಂದು ಹೇಳಿದರು.

ರಾಜ್ಯ ಎಫ್ ಎಸ್ ಎಲ್ ನಿಂದ ವರದಿಗಳು ಬಂದಿವೆ. ಎಲ್ಲಾ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಿದ್ಧವಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಚಾರ್ಜ್‌ಶೀಟ್ ನೀಡಿ ಅವರಿಂದ ಸಲಹೆಗಳನ್ನು ಕೂಡ ಪಡೆಯಲಾಗಿದೆ. ಚಾರ್ಜ್‌ಶೀಟ್ ನೋಡಿರುವ ಅವರು ಕೆಲವು ಬದಲಾವಣೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಕೈ ಸೇರಿವೆ. ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಹಲವು ವರದಿಗಳು ಇನ್ನೂ ಬರಬೇಕಿದೆ,ಹಾಗಾಗಿ ಇನ್ನೆರಡು ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು  ದಯಾನಂದ್ ತಿಳಿಸಿದರು.