ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ  ಕಾನೂನು ಹೋರಾಟ -ಯದುವೀರ್

ಮೈಸೂರು: ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ತಡೆಯಾಜ್ಞೆ ಇದ್ದರೂ ಪ್ರಾಧಿಕಾರದ ಸಭೆ ಮಾಡಿದ್ದಾರೆ,ಆ ಸಭೆಗೆ ನಾನು ಭಾಗವಹಿಸಿಲ್ಲ,ಇವರು ಮಾಡುತ್ತಿರುವ ಸಭೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ಸೆಪ್ಟಂಬರ್ 5 ರವರೆಗೂ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿದೆ. ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ,ಮುಂದಿನ ದಿನಗಳಲ್ಲಿ ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಪ್ರಾಧಿಕಾರವನ್ನ ವಿರೋಧಿಸಿ ನ್ಯಾಯಾಲಯದಲ್ಲಿ ನಾವು ಚಾಲೆಂಜ್ ಮಾಡುತ್ತೇವೆ‌. ದೇವಾಲಯ, ಮಸೀದಿ, ಚರ್ಚ್ ಗಳಿಗೆ ಪ್ರಾಧಿಕಾರ ಮಾಡುವುದು ಸೂಕ್ತ ಅಲ್ಲ ಎಂದು ತಿಳಿಸಿದರು.

ಪ್ರಾಧಿಕಾರ ರಚನೆಯಿಂದ ನಮ್ಮ ಮೂಲ ಧಾರ್ಮಿಕ ನಂಬಿಕೆ, ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ನಾವು ಧಾರ್ಮಿಕ ಹಕ್ಕುಗಳನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಅದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ.

ಜನಪ್ರತಿನಿಧಿಯಾಗಿ ಮುಂದುವರಿಯುವ ಜೊತೆಗೆ ನಮ್ಮ ಧರ್ಮ, ನಂಬಿಕೆ, ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ‌. ದೇವಾಲಯ ಹುಂಡಿ ಹಣ ದೇವಾಲಯಗಳಿಗೆ ಬಳಕೆ ಆಗಬೇಕು ಎಂದು ಯದುವೀರ್ ಹೇಳಿದರು.