ಸಂಸತ್‌ ಮೇಲೆ ದಾಳಿ:  ಮೈಸೂರಿನ ಮನೋರಂಜನ್‌ ಪ್ರಮುಖ ಸಂಚುಕೋರ

ನವದೆಹಲಿ: ಕಳೆದ ವರ್ಷ ಸಂಸತ್‌ ಮೇಲೆ ದಾಳಿ ನಡೆಸಿದ್ದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಬಯಸಿದ್ದರು ಎಂಬ ಸ್ಫೋಟಕ ಅಂಶ  ಬಯಲಾಗಿದೆ.

ಸಂಸತ್‌ನಲ್ಲಿ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 1 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌  ಸಲ್ಲಿಕೆ ಮಾಡಿದ್ದಾರೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಂಬಿದ್ದ ಆರೋಪಿಗಳು ಅದನ್ನು ಬದಲಿಸಬೇಕು ಎಂಬ ಉದ್ದೇಶ ಹೊಂದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಯೋಜನೆ ಕಾರ್ಯಗತ ಗೊಳಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ಪ್ಲ್ಯಾನ್ ಮಾಡಿದ್ದರು. 

ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಸ್ನೇಹಿತರಾಗಿದ್ದ ಇವರು ಮೈಸೂರು, ಗುರುಗ್ರಾಮ, ದೆಹಲಿ ಸೇರಿ ಐದು ಕಡೆ ಸಭೆ ನಡೆಸಿ ಸಂಸತ್ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು. ಈ ಮೂಲಕ ಶೀಘ್ರದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆಯಲು ಬಯಸಿದ್ದರು.

ಮೈಸೂರಿನ ಮನೋರಂಜನ್ ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಮೈಸೂರಿನಲ್ಲೇ ಮನೋರಂಜನ್ ನೇತೃತ್ವದಲ್ಲಿ ಮೊದಲ ಸಭೆ ನಡೆದಿತ್ತು. ಮೊದಲ ಸಭೆಯಲ್ಲಿ ಹತ್ತು ಮಂದಿ ಭಾಗಿಯಾಗಿದ್ದರು ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಹಿಂಸಾತ್ಮಕ ವಿಡಿಯೋ ತೋರಿಸಿ, ಪ್ರತ್ಯೇಕ ಸಂಘಟನೆ ಹುಟ್ಟುಹಾಕುವ ಯೋಜನೆಯನ್ನು ಮನೋರಂಜನ್ ವಿವರಿಸಿದ್ದ. ಎರಡನೇ ಸಭೆಯನ್ನು ಹರಿಯಾಣದ ಗುರುಗ್ರಾಮದಲ್ಲಿ ನಡೆಸಲಾಗಿತ್ತು. ಇದರಲ್ಲಿ ಏಳು ಮಂದಿ ಭಾಗಿಯಾಗಿದ್ದರು.

ತಂಡಕ್ಕೆ ಮಹಿಳೆಯರನ್ನು ಸೇರಿಕೊಳ್ಳುವ ಉದ್ದೇಶದಿಂದ ನೀಲಂಳನ್ನು ಸೇರಿಸಿಕೊಳ್ಳಲಾಗಿತ್ತು.

ಮೂರನೇ ಸಭೆಯನ್ನು ದೆಹಲಿಯಲ್ಲಿ ನಡೆಸಿದ್ದರು. ಕಡೆಯದಾಗಿ ಇಂಡಿಯಾ ಗೇಟ್ ಬಳಿ ಸೇರಿ ಅಲ್ಲಿಂದ ಸ್ಮೋಕ್ ಕ್ಯಾನ್ ಬಳಸಿ ದಾಳಿ ಮಾಡಲು ಸಂಸತ್ ಗೆ ತೆರಳಿದ್ದರು.

ಅಲ್ಟ್ರಾ ಮಾವೋವಾದಿ-ಪ್ರೇರಿತ ಚಿಂತನೆಯಿಂದ ಪ್ರಚೋದನೆಗೆ ಒಳಗಾಗಿದ್ದ ಮನೋರಂಜನ್‌ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದ್ದ.