ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ.ರಾಜೀವ್ ರಿಂದ ಭಾರೀ ಅಕ್ರಮ:ಆರೋಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ನಡುವೆಯೇ ಮುಡಾ ಮಾಜಿ ಅಧ್ಯಕ್ಷ ಹೆಚ್​. ವಿ. ರಾಜೀವ್ ಕೂಡಾ ದೊಡ್ಡ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಯುಕ್ತರ ಅನುಮತಿ ಇಲ್ಲದೇ ಹೆಚ್​.ವಿ.ರಾಜೀವ್ ಅವರು ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮೈಸೂರು ಜ್ಞಾನ ಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ.

252 ಎಕರೆ ಜಾಗದ ಕೆಲವು ಸರ್ವೆ ನಂಬರ್​ಗಳು ವ್ಯಾಜ್ಯ ನ್ಯಾಯಾಲಯದಲ್ಲಿದೆ, ಹಾಗಾಗಿ ಈ ಬಡವಾಣೆಗಳ ನಿವೇಶನ ಹಕ್ಕುಗಳನ್ನ ಮುಡಾ ವರ್ಗಾವಣೆ ಮಾಡಬಾರದೆಂಬ ಆದೇಶವಿದೆ.

ಆದರೂ ಕೂಡಾ ಹೆಚ್.ವಿ ರಾಜೀವ್ 848 ನಿವೇಶನಗಳನ್ನ ಒಂದೇ ದಿನದಲ್ಲಿ‌ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಅಲ್ಲದೆ ಆಯುಕ್ತರ ಅನುಮೊದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನಗಳನ್ನಬಿಡುಗಡೆಗೊಳಿಸಿ ಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಹಿಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ.

ಈ ನಡುವೆ ಬಿಜೆಪಿ ಶಾಸಕ ಶ್ರೀವತ್ಸ ಅವರು ಹಗರಣ ಕುರಿತುಮಾತನಾಡಿದ್ದು,

ಮುಡಾದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ಮಾಡಿ ರಕ್ಷಣೆ ಮಾಡಿಕೊಳ್ಳಲೆಂದೇ ರಾಜೀವ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕಾಮಗಾರಿ ಪೂರ್ಣ ಆಗದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೂ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶ್ರೀವತ್ಸ ಆಗ್ರಹಿಸಿದ್ದಾರೆ.