ಮೈಸೂರು: ಉತ್ತಮ ಉಪನಗರಗಳ ನಿರ್ಮಾಣದ ಗುರಿಯನ್ನು ಹೊಂದಿದ್ದೇವೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷ ಹೆಚ್. ವಿ. ರಾಜೀವ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಜೀವ್ ಮಾತನಾಡಿದರು.
ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತೇವೆ ಎಂದು ರಾಜೀವ್ ತಿಳಿಸಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಖರೀದಿ ಮಾಡುತ್ತೇವೆ ಎಂದರು.
ಪ್ರಾಧಿಕಾರದ ಬಡಾವಣೆಗಳ ಗುಣಮಟ್ಟ ಖಾಸಗಿ ಬಡಾವಣೆಗಿಂತ ಉತ್ತಮವಾಗಿರುತ್ತದೆ. ಉತ್ತಮ ಕೆಲಸ ಮಾಡುವ ಗುತ್ತಿಗೆದಾರರಿಗೆ ಮಾತ್ರ ಅವಕಾಶ ನೀಡಲಾಗುವುದೆಂದು ಅವರು ಹೇಳಿ, ಸ್ಥಳೀಯರಿಗೂ ಕೆಲಸ ನೀಡುವ ಅವಕಾಶ ಮಾಡಿಕೊಡುತ್ತೇವೆ ಎಂದರು.
ಮೈಸೂರನ್ನು ಸುಂದರ ನಗರವನ್ನಾಗಿಸಬೇಕು. ಈಗ ಮೈಸೂರು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದವರು ತಿಳಿಸಿದರು.
ವಿಶ್ವವೇ ಮೈಸೂರು ನಗರವನ್ನು ಗುರುತಿಸುತ್ತಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಮೈಸೂರು ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಆದ್ದರಿಂದ ಸ್ವಂತ ಊರನ್ನು ಬಿಟ್ಟು ಜನರು ಮೈಸೂರಿನಲ್ಲಿ ನೆಲೆ ನಿಲ್ಲಲು ಬಯಸುತ್ತಿದ್ದಾರೆ. ಯಾರು ಮೈಸೂರಿನಲ್ಲಿ 20, 30 ವರ್ಷಗಳಿಂದ ವಾಸವಿದ್ದು ಯಾರಿಗೆ ಸ್ವಂತ ಸೂರಿಲ್ಲವೋ, ಅವರಿಗೆ ಸೂರು ನೀಡುವ ಕೆಲಸ ಮಾಡುತ್ತೇವೆ ಎಂದವರು ತಿಳಿಸಿದರು.