ಬೆಂಗಳೂರು: ಬೆಂಗಳೂರಿನಲ್ಲಿ ಯು.ಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ನ ಚಿoತನ ಮoಥನದಲ್ಲಿ ಭವಿಷ್ಯದಲ್ಲಿ ಹೆಚ್ಚು ಸಮೃದ್ಧಿಯನ್ನು ವೃದ್ಧಿಸುವ ಕುರಿತು ಚರ್ಚಿಸಲಾಯಿತು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯು.ಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ನ ಚಿoತನ ಮoಥನದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ,ನಾವು ನಡೆಸಿದ ಚರ್ಚೆಯು ಕರ್ನಾಟಕ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯೆ ಇರುವ ಸದೃಢ ಹಾಗೂ ಕ್ರಿಯಾತ್ಮಕ ಪಾಲುದಾರಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ದುಂಡುಮೇಜಿನ ಸಭೆಯಲ್ಲಿ ನಾವು ಕೇವಲ ವ್ಯಾವಹಾರಿಕ ಅವಕಾಶಗಳಷ್ಟೇ ಅಲ್ಲದೆ, ಹಿಂದೆಂದಿಗಿಂತಲೂ ಹೆಚ್ಚಿನ ಸಂಪರ್ಕ ಹೊಂದಿರುವ ಹಾಗೂ ಭವಿಷ್ಯದಲ್ಲಿ ಹೆಚ್ಚು ಸಮೃದ್ಧಿಯನ್ನು ತರುವ ನೀಲನಕ್ಷೆಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲದೆ ಭಾರತದ ಸಿಲಿಕಾನ್ ವ್ಯಾಲಿ ಕೂಡ ಹೌದು. ನಗರವು ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಯಲ್ಲಿರುವುಲ್ಲದೇ ನಾವೀನ್ಯತೆ, ಉದ್ಯಮಶೀಲತೆ, ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಮುಂದುವರೆದಿದೆ ಎಂದು ತಿಳಿಸಿದರು.
ಕರ್ನಾಟಕ ವೈವಿಧ್ಯಮಯ ಸಂಪನ್ಮೂಲಗಳ ನಾಡು, ಕೌಶಲ್ಯಭರಿತ ಕಾರ್ಯಪಡೆಯಿಂದ ಹಿಡಿದು ನೈಸರ್ಗಿಕ ಸಂಪತ್ತಿನವರೆಗೆ, ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಸಂಸ್ಕೃತಿಯಿಂದ ಹಿಡಿದು ಸದೃಢ ಉತ್ಪಾದನಾ ತಳಪಾಯ ಇಲ್ಲಿದೆ ಎಂದರು.
ರಾಜ್ಯವು ಜಗತ್ತಿನ ಮುಂಚೂಣಿಯಲ್ಲಿರುವ ಐ.ಟಿ ಕಂಪನಿಗಳಿಗೆ, ಬಯೋ ಟೆಕ್ನಾಲಜಿ ಉದ್ಯಮಗಳಿಗೆ ಮತ್ತು ಸ್ಟಾರ್ಟ್ ಅಪ್ ಗಳಿಗೆ ತವರೂರಾಗಿದೆ ಎಂದು ಸಿದ್ದು ಹೇಳಿದರು.
ಕರ್ನಾಟಕ ರಾಜ್ಯ ವ್ಯಾಪಾರ -ವ್ಯವಹಾರಗಳಿಗೆ ಮುಕ್ತವಾಗಿದೆ. ಕರ್ನಾಟಕದಲ್ಲಿರುವ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯ ಮಂತ್ರಿ ಆಹ್ವಾನಿಸಿದರು.
ಐಟಿ-ಬಿಟಿ, ಏರೋಸ್ಪೇಸ್, ಅಥವಾ ಇನ್ಯಾವುದೇ ಕ್ಷೇತ್ರವಿರಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ನಿಮ್ಮ ಸಹಯೋಗದೊಂದಿಗೆ ಒಟ್ಟಾಗಿ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ, ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ವಾತಾವರಣವನ್ನು ಕಲ್ಪಿಸಲು ಬದ್ಧವಾಗಿದೆ. ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದ್ದು, ನಮ್ಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇವುಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಇಲ್ಲಿ ಕೈಗೊಂಡ ಸಹಯೋಗ ಹಾಗೂ ಸಂಪರ್ಕಗಳು ಕರ್ನಾಟಕ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಪರಸ್ಪರ ಲಾಭದಾಯಕ ಫಲಿತಾಂಶಗಳಿಗೆ ಎಡೆಮಾಡಿಕೊಡಲಿವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸಮೃದ್ಧಿ,ಪಾಲುದಾರಿಕೆ ಮತ್ತು ಪ್ರಗತಿಯ ಭವಿಷ್ಯದತ್ತ ಒಟ್ಟಾಗಿ ಹೆಜ್ಜೆ ಇಡೋಣ ಎಂದು ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಗಳಿಗೆ ಸಿಎಂ ಕರೆ ನೀಡಿದರು.