ಪ್ರಕೃತಿಯಿಂದ ಲಾಭ ಪಡೆಯುವ ಎಲ್ಲರಲ್ಲೂ ಪ್ರಕೃತಿ ರಕ್ಷಣೆಯ ಹೊಣೆ ಇರಬೇಕು-ಸಿಎಂ

ಬೆಂಗಳೂರು: ಪ್ರಕೃತಿಯಿಂದ ಲಾಭ ಪಡೆಯುವ ಎಲ್ಲರಲ್ಲೂ ಪ್ರಕೃತಿ ರಕ್ಷಣೆಯ ಹೊಣೆ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮ‌ರ ದಿ‌ನದ ಅಂಗವಾಗಿ ಸಿಎಂ ಅರಣ್ಯ ಭವನದಲ್ಲಿನ‌ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ, ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು ಎಂದು ಹೇಳಿದರು.

ಕಾಡು ಮತ್ತು ವನ್ಯ ಪ್ರಾಣಿ ಸಂಪತ್ತಿನ‌ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು  ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದರೆ ನಾವು ನಮ್ಮ‌ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ ಎಂದು ಸಿಎಂ ತಿಳಿಸಿದರು.

ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕು,ಅದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಿ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ,ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು,ಅವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ಥಿಯಾಗಲಿ ಎಂದು ಆಶಿಸಿದರು‌

ಸಚಿವ ಈಶ್ವರ್ ಖಂಡ್ರೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹುತಾತ್ಮ‌ರ ಕುಟುಂಬದವರು ಉಪಸ್ಥಿತರಿದ್ದರು.