ಮೈಸೂರು: ದಸರಾ ಮಹೋತ್ಸವ ಆಚರಣೆಗೆ ಸರಕಾರವೇ 40 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದೆ,ಆದರೆ ಮತ್ತೆ ಪ್ರಾಯೋಜಕರನ್ನು ಹುಡುಕುತ್ತಿರುವುದಾದರು ಏಕೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಈ ಹಿಂದೆ 2003 ರಲ್ಲಿ ರಾಜ್ಯದಲ್ಲಿ ಕಂಡು ಕೇಳರಿಯದ ಭೀಕರ ಬರಗಾಲ ಇತ್ತು.ಆಗ ದುಂದು ವೆಚ್ಚ ಮಾಡಿ ದಸರಾ ಆಚರಣೆ ಮಾಡುವುದು ಬೇಡ ಎಂದು ರೈತ ಸಂಘಟನೆ ಹಾಗೂ ಕನ್ನಡ ಪರ ಹೋರಾಟಗಾರರು ಚಳವಳಿ ಆರಂಭಿಸಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನಾನು, ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನವೊಲಿಸಿ ದಸರಾ ಆಚರಣೆಗೆ ಮುಂದಾದೆ ಎಂದು ಹೇಳಿದರು.
ಸರಕಾರದ ನಯಾ ಪೈಸೆಯೂ ಬೇಡ, ಪ್ರಾಯೋಕರ ಸಹಕಾರದಿಂದ ನಾಡಹಬ್ಬ ಮಾಡುವುದಾಗಿ ತಿಳಿಸಿದೆ.ಇದಕ್ಕೆ ಎಸ್. ಎಂ.ಕೃಷ್ಣ ಅವರು ಸಮ್ಮತಿಸಿದರು. ಅದರಂತೆ ಟಿವಿಎಸ್ ಕಂಪನಿ ಸೇರಿದಂತೆ ಪ್ರಮುಖವಾದ ಒಂದೆರೆಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಣ ಸಂಗ್ರಹಿಸಿ ದಸರಾ ಆಚರಿಸಿದೆವು ಎಂದು ತಿಳಿಸಿದರು.
ಅದೆಲ್ಲ ಮುಗಿದ ನಂತರ ಪ್ರಾಯೋಜಕತ್ವ ಪಡೆಯುವುದೇ ಒಂದು ಚಾಳಿ ಆಗೋಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಈಗ ರಾಜ್ಯ ಸರಕಾರವೇ ಈ ಬಾರಿ ಅದ್ದೂರಿ ದಸರಾ ಮಾಡುವುದಾಗಿ ಹೇಳಿಕೆ ನೀಡಿದ್ದಲ್ಲದೆ 40 ಕೋಟಿ ರೂ. ಅನುದಾನವನ್ನು ಘೋಷಿಸಿದೆ.ಆದರೂ ಪ್ರಾಯೋಜಕರ ಬಳಿ ಹಣ ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿಶ್ವನಾಥ್ ಪ್ರಶ್ನಿಸಿದರು.
ದಸರಾ ಪ್ರಾಯೋಜಕತ್ವ ಜಂಬೂ ಸವಾರಿ 2 ಕೋಟಿ, ಅಂಬಾರಿ 1 ಕೋಟಿ ಅಂತ ಹೇಳಿದ್ದಾರೆ ಅಂಬಾರಿಗೆ ಬ್ಯಾನರ್ ಕಟ್ತಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃವದಲ್ಲಿ ನಡೆದ ಪ್ರಾಯೋಜಕತ್ವದ ಸಭೆಯಲ್ಲಿ ಜಂಬೂವಾರಿಗೆ ಇಷ್ಟು ಕೋಟಿ, ಅಂಬಾರಿಗೆ ಇಷ್ಟು ಕೋಟಿ ಎಂದು ನಿಗಧಿ ಮಾಡಿದ್ದಾರೆ. ಜಂಬೂಸವಾರಿಯಲ್ಲೇ ತಾನೆ ಅಂಬಾರಿ ಸಾಗುವುದು,ಅದು ಹೇಗೆ ಎರಡಕ್ಕೂ ಪ್ರತ್ಯೇಕ ಪ್ರಾಯೋಜಕತ್ವ ಪಡೆಯುತ್ತಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.