ಮಂಡ್ಯ: ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ ಎಂದು ಕೇಂದ್ರ ಸಚಿವ ಮಂಡ್ಯ ಸಂಸದ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಾಗಮಂಗಲದ ಗಲಭೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಇಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಆಗ ಕಾಂಗ್ರೆಸ್‌ನವರೇ ಬೆಂಕಿ ಹಚ್ಚಿ ಗಲಾಟೆ ಮಾಡಿಸಿದ್ದರು ಎಂದು ಹೇಳಿದರು.
ಅದು ಕೋಮು ಗಲಭೆ ಆಗಿರಲಿಲ್ಲ,ಮುಂದೆ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಲಿದೆ,ಅದಕ್ಕಾಗಿ ಹೀಗೆ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಗಣೇಶ ಕೂರಿಸಿದವರನ್ನೇ ಎಫ್‌ಐಆರ್‌ನಲ್ಲಿ ಎ1 ಆರೋಪಿಯನ್ನಾಗಿ ಮಾಡಿದ್ದೀರಾ ಇದು ನಿಮ್ಮ ನಡವಳಿಕೆ ಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಪೊಲೀಸರು ತಮ್ಮ ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಇದನ್ನು ಹಾಳು ಮಾಡಿಕೊಳ್ಳುವುದು ಬೇಡ ಅಮಾಯಕರನ್ನು ಬಂಧಿಸಿರೋದು ತಪ್ಪು,ಅವರು ಜೈಲಿನಿಂದ ಬರೋದು ಯಾವಾಗ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.
ನಾಗಮಂಗಲ ಗಲಭೆ ಪ್ರಕರಣ ಸಂಬಂಧ ನಷ್ಟವಾದ ವ್ಯಾಪರಿಗಳಿಗೆ ವೈಯಕ್ತಿಕವಾಗಿ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತೇನೆ ಎರಡು ಧರ್ಮದವರಿಗೂ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಹಳೆ ಮೈಸೂರು ಭಾಗದಲ್ಲಿ ಎರಡು ಸಮಾಜದವರು ಸೌಹಾರ್ದತೆಯಿಂದ ಜೀವನ ಮಾಡುತ್ತಿದ್ದಾರೆ. ರಾಜಕೀಯ ಸಂಘಟನೆಗಾಗಿ ಜನರ ಬದುಕು ಛಿದ್ರ ಮಾಡಬೇಡಿ ಎಂದು ಕುಮಾರಸ್ವಾಮಿ ಹೇಳಿದರು.
ಗೃಹ ಸಚಿವರು ಇದು ಸಣ್ಣ ವಿಷಯ, ಇದಕ್ಕೆ ಮಹತ್ವ ಕೋಡೋದು ಬೇಡಾ ಅಂತಾರೆ. ಈ ರೀತಿ ಹೇಳಿಕೆ ಮೂಲಕ ಜನರಿಗೆ ಯಾವ ಸಂದೇಶ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಮೆರವಣಿಗೆಗೆ ಅನುಮತಿ ಕೊಟ್ಟಿದ್ದು ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾಗಿದ್ದು ನೀವು. ಗಣೇಶನ ಮೆರವಣಿಗೆ ವೇಳೆ ಗಣಪತಿಗೆ ಜೈಕಾರ ಹಾಕಿದ್ದಾರೆ. ಆಗ ಮಸೀದಿ ಬಳಿ ಇನ್ನೊಂದು ಜನಾಂಗ ಅವರ ಘೋಷಣೆ ಕೂಗಿದ್ದಾರೆ. ಆಲ್ಲಿ ಎಷ್ಟು ಜನ ಪೊಲೀಸರನ್ನು ಆಯೋಜಿಸಿದ್ದೀರಿ,ಇದನ್ನು ನೋಡಿದ್ರೆ ಈ ಘಟನೆ ಪೂರ್ವನಿಯೋಜಿತ ಅನ್ನಿಸುತ್ತದೆ. ಘಟನೆಗೂ ಮುನ್ನ ಇಲ್ಲಿದ್ದ ಸಿಆರ್‌ಪಿಎಫ್ ವಾಹನವನ್ನು ಕರೆಸಿಕೊಂಡಿದ್ದಾರೆ. ಘಟನೆಯಾದ ಒಂದು ಗಂಟೆಗೆ ಮಾಧ್ಯಮದವರಿಗೆ ಗೊತ್ತಾಗುತ್ತದೆ. ಪೊಲೀಸರಿಗೆ ಯಾಕೆ ಗೊತ್ತಾಗಿಲ್ಲ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಈ ಎಫ್‌ಐಆರ್ ನೋಡಿದರೆ ಪರಮೇಶ್ವರ್‌ನ ಗೃಹ ಸಚಿವ ಅನ್ನುವುದಕ್ಕೆ ಆಗುತ್ತಾ ಎಂದು ಹೆಚ್ ಡಿ ಕೆ ಗುಡುಗಿದರು.
ಸ್ಥಳೀಯ ಪೊಲೀಸರ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ, ಪ್ರತಿಯೊಂದು ರಾಜಕೀಯ ಎಂದು ಕಾಂಗ್ರೆಸ್ ಹೇಳೋದು ಸರಿಯಲ್ಲ. ಅಮಾಯಕ ಜನರ ಬದುಕು ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ಇದು ಎಂದು ಕಿಡಿಕಾರಿದರು.
ರಾಜಾರೋಶವಾಗಿ ತಲ್ವಾರ್ ಇಟ್ಟುಕೊಂಡು ಓಡಾಡುತ್ತಾರೆ,ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಎಷ್ಟು ಧೈರ್ಯ ಇರಬೇಕು ಇವರಿಗೆ ಎಂದು ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದರು.
ಮಾಜಿ ಶಾಸಕ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಮುಖಂಡರು ಈ ವೇಳೆ ಹಾಜರಿದ್ದರು.