ಮೈಸೂರು: ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ಸಿಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರು ವಿ.ಸೋಮಣ್ಣ ಭರವಸೆ ನೀಡಿದರು.
ಶುಕ್ರವಾರ ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಅವರು ಮಾತನಾಡಿದರು.
ಅತಿ ಹೆಚ್ಚು ಜವಾಬ್ದಾರಿಯನ್ನು ಹೊಂದಿರುವ ರೈಲ್ವೆ ಇಲಾಖೆಯು ರಾಷ್ಟ್ರದ ವಿಕಾಸದ ಎಂಜಿನ್ ನಂತೆ ಕಾರ್ಯನಿರ್ವಹಿಸುತ್ತದೆ. ಹೊರ ರಾಷ್ಟ್ರದವರು ವಿಕಸಿತ ಭಾರತದ ರೈಲ್ವೆ ಇಲಾಖೆಯ ಅಭಿವೃದ್ಧಿಯ ಬಗ್ಗೆ ಮಾತನಾಡುವಂತೆ ಮಾಡಬೇಕು ಎಂದು ಹೇಳಿದರು.
ಪ್ರತಿ ವರ್ಷವು 124 ಕಿ.ಮೀ ರೈಲ್ವೆ ಲೈನ್ಸ್ ಗಳು ಹೆಚ್ಚಾಳವಾಗುತ್ತಿದೆ. 333 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದ 15 ರೈಲ್ವೆ ಸ್ಟೇಷನ್ಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, 2025 ಕ್ಕೆ ಈ ಯೋಜನೆಯು ಪೂರ್ಣಗೊಳ್ಳಲಿದೆ. ಪ್ರಸ್ತುತ ಮೈಸೂರಿನಲ್ಲಿ 80 ರೈಲುಗಳ ಸಂಚಾರವಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಮೈಸೂರು-ಕುಶಾಲನಗರ ನಡುವೆ 89 ಕಿ.ಮೀ ರೈಲು ಮಾರ್ಗ ನಿರ್ಮಾಣ ಹಾಗೂ ಚಾಮರಾಜನಗರದಲ್ಲಿ ಸುಮಾರು 142 ಕಿ.ಮೀ ನ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನರಿಗೆ ಹಾಗೂ ಪ್ರಯಾಣಿಕರಿಗೆ ಸಹಾಯವಾಗುತ್ತದೆ ಎಂದು ಸೋಮಣ್ಣ ತಿಳಿಸಿದರು.
ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯವಾಗುವಂತೆ ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಮೆಮೊ ರೈಲುಗಳನ್ನು ತರಲಾಗಿದ್ದು, ಇದೇ ತಿಂಗಳ 27 ನೇ ತಾರೀಕಿನಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಸರ್ಕ್ಯುಲರ್ ರೈಲು ಯೋಜನೆಯಲ್ಲಿ ಮೈಸೂರು ಜಿಲ್ಲೆಯು ಒಳಪಟ್ಟಿದ್ದು, ಇದರಿಂದ ಬೆಂಗಳೂರು ಹಾಗೂ ಮೈಸೂರಿಗೆ ಮತ್ತು ಮೆಟ್ರೋಗೆ ನೇರ ಸಂಪರ್ಕವನ್ನು ಕಲ್ಪಿಸಲಾಗುತ್ತದೆ ಇದರಲ್ಲಿ ಹೆಚ್ಚು ಸರಕು ಸಾಗಾಣಿಕೆಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೂ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ರೈಲುಗಳಲ್ಲಿ ಮಹಿಳಾ ಭೋಗಿಗಳನ್ನು ಹೆಚ್ಚಿಸುವ ಸಂಬoಧ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ರೈಲುಗಳಿಗೆ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಇದರ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್ ಟಿ.ಎಸ್.ಶ್ರೀವತ್ಸ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.