ಮೈಸೂರು: ಇತ್ತೀಚೆಗೆ ಮಲೆನಾಡು ಭಯೋತ್ಪಾದಕ ಸ್ಲೀಪರ್ ಸೆಲ್ ಗಳ ತಾಣವಾಗುತ್ತಿದೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಾಟ ವಿಚಾರ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
ಈ ಹಿಂದೆ ಕೂಡಾ ಕೊಪ್ಪದಲ್ಲಿ ಯಾಸಿನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರ ನಡೆಸಲಾಗಿತ್ತು ಅದನ್ನ ಪತ್ತೆ ಹಚ್ಚಿದ್ದು ಭಜರಂಗದಳ, ಇದು ಹೀಗೇ ಮುಂದುವರಿದರೆ ದೇಶಕ್ಕೆ ಅಪಾಯಕಾರಿ ಎಂದು ಎಚ್ಚರಿಸಿದ ರವಿ, ಇದರ ಹಿಂದಿನ ಜಾಲವನ್ನು ತನಿಖೆಯಿಂದ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ಕಿಡಿಗೇಡಿಗಳನ್ನ ಬಂಧಿಸಬೇಕಿತ್ತು. ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಬಿಟ್ಟು ಕಳಿಸಿರುವುದು ಖಂಡನೀಯ ಎಂದು ಹೇಳಿದರು.
ಮಂಗಳೂರು ಬಿ.ಸಿ ರೋಡ್ ನಲ್ಲಿ ಹಿಂದೂಗಳಿಗೆ ಸವಾಲು ಹಾಕಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಇದು ಭಾರತದ ದೇಶಕ್ಕೆ ಹಾಕಿರುವ ಸಾವಲು. ಯುದ್ಧವನ್ನ ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ, ಇಲ್ಲವಾದರೇ ನಮ್ಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ ಅಷ್ಟೇ ಎಂದು ಹೇಳಿದರು.
ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ, ಹನಮಂತಪ್ಪ ಆಡಿಯೋಯಿಂದ ಇದು ಸಾಭೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ನವರು ತಮ್ಮ ಪಕ್ಷದವರಿಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಪ್ರಕರಣದ ಹಿಂದೆ ಹೊರಗಿನ ಶಕ್ತಿ ಕೆಲಸ ಮಾಡಿದೆ ಎಂಬ ಅನುಮಾನ ನನಗೆ ಇತ್ತು, ಕೇರಳದವರ ಹೆಸರು ಬಹಿರಂಗವಾಗಿರುವುದರಿಂದ ಅದು ಸಾಭೀತಾದಂತಾಗಿದೆ ಸಂಪೂರ್ಣ ತನಿಖೆಯನ್ನ ಎನ್ಐಎ ಗೆ ವಹಿಸಬೇಕು ಎಂದು ಒತ್ತಾಯಿಸಿದರು.