ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಆಯ್ಕೆಯಾಗಿದ್ದು,ಅವರ ಹೆಸರನ್ನು ಹಾಲಿ ಸಿಎಂ ಕೇಜ್ರಿವಾಲ್ ಪ್ರಸ್ತಾಪಿಸಿದರು.
ಮಂಗಳವಾರ ನಡೆದ ಎಎಪಿ ಶಾಸಕರ ಸಭೆಯಲ್ಲಿ ಪಕ್ಷದ ನಾಯಕ ದಿಲೀಪ್ ಪಾಂಡೆ, ನೂತನ ಮುಖ್ಯಮಂತ್ರಿಯನ್ನು ಕೇಜ್ರಿವಾಲ್ ನಿರ್ಧರಿಸಬೇಕೆಂದು ಪ್ರಸ್ತಾಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲಾ ಎಎಪಿ ಶಾಸಕರು ಎದ್ದುನಿಂತು ಅದನ್ನು ಸರ್ವಾನುಮತದಿಂದ ಒಪ್ಪಿಕೊಂಡರು.
ಹಾಗಾಗಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಆಯ್ಕೆಯಾಗಿದ್ದಾರೆ.
ಎಎಪಿ ಪಕ್ಷದ ಶಾಸಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಈ ಸಂಬಂಧ ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಅತಿಶಿ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಮತ್ತು ರೋಡ್ಸ್ ವಿದ್ವಾಂಸರಾಗಿದ್ದಾರೆ.
ಕಲ್ಕಾಜಿಯ ಶಾಸಕರಾಗಿದ್ದ 43 ವರ್ಷದ ಅತಿಶಿ, ದೆಹಲಿಯ ಈಗ ರದ್ದುಗೊಂಡಿರುವ ಅಬಕಾರಿ ನೀತಿ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿದ ನಂತರ ಸಚಿವರಾಗಿದ್ದರು.
ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೈಲಿನಲ್ಲಿದ್ದಾಗ ಅತಿಶಿ ಪಕ್ಷದ ಕಾರ್ಯಕ್ರಮಗಳು ಮತ್ತು ಮಾಧ್ಯಮ ಸಂವಾದದಲ್ಲಿ ಪಕ್ಷದ ನಿಲುವನ್ನು ಸ್ಪಷ್ಪಡಿಸುವ ಮೂಲಕ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅರವಿಂದ್ ಕೇಜ್ರಿವಾಲ್ ಭಾನುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಜನರು ಪ್ರಾಮಾಣಿಕತೆ ಪ್ರಮಾಣ ಪತ್ರ ನೀಡಿದಾಗ ಮಾತ್ರ ಸಿಎಂ ಕುರ್ಚಿ ಮೇಲೆ ಕೂರುತ್ತೇನೆ ಎಂದು ಅವರು ಹೇಳಿದ್ದರು.
ಹಾಗಾಗಿ ಸೆಪ್ಟೆಂಬರ್ 26 ಮತ್ತು 27ರಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಅರವಿಂದ್ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.