ಮೈಸೂರು: ಮುಡಾ ಹಗರಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ,ರಾಜ್ಯಾಧ್ಯಕ್ಷರೇ ಭಾಗಿಯಾಗಿದ್ದಾರೆ
ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಆರೋಪಿಸಿದ್ದು,ದಾಖಲೆ ಬಿಡುಗಡೆ ಮಾಡಿದ್ದಾರೆ.
ಅಕ್ರಮವಾಗಿ ಹೆಚ್ಚುವರಿ ನಿವೇಶನ ಖರೀದಿ ಮಾಡಿ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿ 7 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಕೇವಲ 5,36,200 ರೂ ಗಳಿಗೆ ಪಡೆದಿದ್ದಾರೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಶಿವರಾಮು ಆರೋಪಿಸಿದರು.
ಬಿಜೆಪಿ ಜಿಲ್ಲಧ್ಯಕ್ಷರಿಂದಲೇ ಮುಡಾಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ,ಅದು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುವಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಶಿವರಾಮು ಪ್ರಶ್ನಿಸಿದರು.
ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸರಿನಲ್ಲಿದ್ದ ಜಂಟಿ ಜಾಗ ಸರ್ವೆ ನಂ 85/2 ರಲ್ಲಿ 1 ಎಕರೆ 3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು, ಅರ್ಜಿ ಸಲ್ಲಿಸಿದ ಬಳಿಕ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ ಪಡೆಯಲಾಗಿದೆ ಎಂದು ಶಿವರಾಮು ಹೇಳಿದರು.
೫೦ ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ ಹಾಕಲಾಯಿತು, ಅಂದಿನ ಮುಡಾ ಆಯುಕ್ತ ನಟೇಶ್, ಇಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮ ಮಾಡಿದ್ದಾರೆ ಇವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದವರು.ಮಹದೇವಸ್ವಾಮಿಯ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸರಸ್ವತಿಪುರಂನಲ್ಲಿ 50×80 ಹೆಚ್ಚುವರಿ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ಇದೇ ನಿವೇಶನ ಖರೀದಿ ಮಾಡಿ, ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ, ಕೂಡಲೇ ನಿವೇಶನವನ್ನ ತಡೆ ಹಿಡಿಯುವಂತೆ ಶಿವರಾಮು ಆಗ್ರಹಿಸಿದರು.
ಮುಡಾ ಭ್ರಷ್ಟಾಚಾರದ ಪಿತಾಮಹ ಬಿ. ವೈ. ವಿಜಯೇಂದ್ರ. 2021 ರಲ್ಲಿ ವಿಜಯೇಂದ್ರ ಪಟಾಲಮ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರು ದೂರಿದರು.