ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ಗೆ ದೇವರಾಜ ಅರಸು ಬಗ್ಗೆ ಗೊತ್ತಿಲ್ಲ-ವಿಶ್ವನಾಥ್

ಮೈಸೂರು: ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ರಿಗೆ ದೇವರಾಜ ಅರಸು ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ದೇವರಾಜ್ ಅರಸು ಬಗ್ಗೆ ಮಾತನಾಡಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದರು ಎಂದಿದ್ದಾರೆ. ವಿದೇಶದಲ್ಲಿ ಓದಿರೋರಿಗೆ ನಮ್ಮ ರಾಜ್ಯದ ಇತಿಹಾಸ ಗೊತ್ತಿಲ್ಲ ಎಂದು ‌ಛೇಡಿಸಿದರು.

ಅರವಿಂದ ಬೆಲ್ಲದ್ ಅವರು ಕರ್ನಾಟಕದ ಇತಿಹಾಸವನ್ನ ಓದಿ ತಿಳಿದುಕೊಂಡು ಮಾತನಾಡಬೇಕು ಎಂದು ಚಾಟಿ ಬೀಸಿದರು.

ಹುಬ್ಬಳ್ಳಿಯಲ್ಲಿ ಸಾಕಷ್ಟು ಆಸ್ತಿಯನ್ನ ನೀವು ಹೊಂದಿದ್ದೀರಾ, ಬಡವರ ಕಷ್ಟ ನೋವು ನಿಮಗೆ ತಿಳಿದಿಲ್ಲ,ಲಿಂಗಾಯತರಿಗೆ ಅರಸು ಮೀಸಲಾತಿ ನೀಡಲಿಲ್ಲ ಎಂದಿದ್ದೀರಾ, ಸಂವಿಧಾನ ಜಾರಿಗೆ ಬರುವ ಮುನ್ನವೇ ರಾಜಪ್ರಭುತ್ವದಲ್ಲಿ ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದಾರೆ.

3ಬಿ ನಲ್ಲಿ ಲಿಂಗಾಯತರಿಗೆ ಈಗಲೂ ಮೀಸಲಾತಿ ಇದೆ,ಲಿಂಗಾಯತರಲ್ಲಿ ಅನೇಕ ಬಡವರು ಇದ್ದಾರೆ, ದೇವರಾಜ ಅರಸು ಅವರು ಯಾವುದೇ ಒಂದು ಜಾತಿ ಪರವಾಗಿ ಕೆಲಸ ಮಾಡಿಲ್ಲ ಎಲ್ಲ ಜಾತಿ,ದರ್ಮದವರಿಗೂ ಒಳಿತು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ ಎಂದು ಬೆಲ್ಲದ್ ಗೆ ಸೂಚ್ಯವಾಗಿ ಹೇಳಿದರು.

ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್,  ಈ ರೀತಿ ಆಗಬಾರದು. ಜಿಲ್ಲಾ ಮಂತ್ರಿಗಳು ಸುಮ್ಮನೆ ಭಾಷಣ ಮಾಡುತ್ತಾರೆ ಅಷ್ಟೇ. ಜಿಲ್ಲೆಯ ಸೂಕ್ಷ್ಮತೆಯನ್ನ ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಅದು ಯಾವ ಸೀಮೆ ಮಂತ್ರಿ ನೀವು‌ ಎಂದು ಚಲುವರಾಯಸ್ವಾಮಿ ಅವರ ವಿರುದ್ದವೂ ಕಿಡಿಕಾರಿದರು.

ಕಾಂತರಾಜು ವರದಿ ಹೊರಗಡೆ ಬರಲೇ ಇಲ್ಲಾ ಅಹಿಂದ ಅಂತೀರಾ ಕಾಂತರಾಜು ವರದಿ ಜನಕ್ಕೆ ತಿಳಿದುಕೊಳ್ಳಲು ಬಿಡಲಿಲ್ಲ ನೀವು. ಈ ಕಡೆ ಬಂದಾಗ ಬಸವಣ್ಣ ಆ ಕಡೆ ಹೋದಾಗ ರಾಯಣ್ಣ ಅಂಬೇಡ್ಕರ್, ಬರೀ ಭಾಷಣಕ್ಕೆ ಸೀಮಿತ ಆಗೋದ್ರಿ ಸಿದ್ದರಾಮಯ್ಯನೋರೇ ಎಂದು ಸಿಎಂ ವಿರುದ್ದ ಕೂಡಾ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮೊದಲನೇ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ರು. ಎರಡನೇ ಅವಧಿಯಲ್ಲಿ ಭ್ರಷ್ಟರ ಧ್ವನಿ ಆಗ್ತಿದ್ದಾರೆ. ನಾವು ಸಿದ್ದರಾಮಯ್ಯ ಈ ರೀತಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮುನಿರತ್ನ ನಮ್ಮ ಜೊತೇನೆ ಬಿಜೆಪಿಗೆ ಬಂದರು. ಕಾಂಗ್ರೆಸ್ ತೊರೆದು ಯಡಿಯೂರಪ್ಪ ಸಿಎಂ ಮಾಡಲು ನಮ್ಮ ಜೊತೆ ಬಂದಿದ್ದರು, ಯಡಿಯೂರಪ್ಪ ಅವರನ್ನು ಮಂತ್ರಿ ಕೂಡ ಮಾಡಿದ್ದರು. ಮುನಿರತ್ನನ್ನ ಸಿ.ಟಿ ರವಿ, ಅಶ್ವತ್ ನಾರಾಯಣ್ ಡಿಫೆಂಡ್ ಮಾಡಬಾರದು. ಎರಡು ದಿನ ಜೈಲಲ್ಲಿ ಇರಲಿ ಜಾತಿ ನಿಂದನೆ ಮಾಡೋದು ಅಂದ್ರೆ ಏನೆಂಬುದು ಅರ್ಥ ಆಗುತ್ತೆ ಎಂದು ಶಾಸಕ ಮುನಿರತ್ನ ವಿರುದ್ದವೂ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.