ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು, ಅಕ್ಟೋಬರ್ ಒಂದ ರವರೆಗೆ ನಡೆಯುತ್ತದೆ.
ಈ ಅಭಿಯಾನಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸುವ ಮೂಲಕ ಚಾಲನೆ ನೀಡಿದರು.
ನಂತರ ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಯಿತು.
ಈ ಉಪಕ್ರಮವು ರೈಲ್ವೆ ನಿಲ್ದಾಣಗಳು, ರೈಲುಗಳು, ಕಛೇರಿಗಳು ಮತ್ತು ಇತರ ರೈಲ್ವೆ ಆವರಣಗಳಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ರೈಲ್ವೆ ನೌಕರರು ಮತ್ತು ಸಾರ್ವಜನಿಕರನ್ನು ತೊಡಗಿಸುತ್ತದೆ.
ಸ್ವಚ್ಛ ಪರಿಸರ, ನೈರ್ಮಲ್ಯ ಅಭ್ಯಾಸಗಳು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಒಳಗೊಂಡಿದೆ.
ಈ ವೇಳೆ ಶಿಲ್ಪಿ ಅಗರ್ವಾಲ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು.
ಅಭಿಯಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಪ್ರೋತ್ಸಾಹಿಸಿದರು.
ಸ್ವಚ್ಛತಾ ಅಭಿಯಾನವು ಶುಚಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ನೈರ್ಮಲ್ಯದ ಮಹತ್ವದ ಕುರಿತು ನೌಕರರು ಮತ್ತು ಪ್ರಯಾಣಿಕರಿಗೆ ಅರಿವು ಮೂಡಿಸಲು ಸಾರ್ವಜನಿಕ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.
ಸ್ವಚ್ಛತಾ ಕರ್ಮಚಾರಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಮತ್ತು ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ)ಎಂಬ ಹಸಿರು ಉಪಕ್ರಮದ ಭಾಗವಾಗಿ ಸಸಿಗಳನ್ನು ನೆಡಲಾಗುವುದು. ತ್ಯಾಜ್ಯವನ್ನು ಕಡಿಮೆ ಮಾಡಲು, ತ್ಯಾಜ್ಯವನ್ನು ಮರುಬಳಕೆ ಮಾಡಿ ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಈ ಅಭಿಯಾನವು ಕಸದ ನಿರ್ವಹಣೆಯಲ್ಲೂ ಗಮನ ಹರಿಸುತ್ತದೆ ಎಂದು ಶಿಲ್ಪಿ ತಿಳಿಸಿದರು.ವಿಭಾಗವು ಅಕ್ಟೋಬರ್ 2 ರಂದು, ಗಾಂಧಿ ಜಯಂತಿ ಆಚರಣೆಯ ಭಾಗವಾಗಿ ರೈಲ್ವೆ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲು ರೈಲ್ವೆ ಸಿಬ್ಬಂದಿ, ಪ್ರಯಾಣಿಕರು ಮತ್ತು ಸ್ಥಳೀಯ ವ್ಯಕ್ತಿಗಳನ್ನು ಒಳಗೊಂಡ ಸಂಯೋಜಿತ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿದೆ.