ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದರು.
ಡ್ರಗ್ಸ್ ಜಾಲ ತಡೆಯುವ ಬಗ್ಗೆ ಸಚಿವರು,ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಡ್ರಗ್ಸ್ ಹಾವಳಿ ತಡೆಗೆ ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಪದೇ,ಪದೇ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಿದ್ದೇನೆ,ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ ಎಂದು ಹೇಳಿದರು.
ಯಾವುದೇ ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವಿಲ್ಲ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ದಂಧೆ ಕಂಡುಬಂದಲ್ಲಿ ಠಾಣಾಧಿಕಾರಿ, ಡಿವೈಎಸ್ ಪಿ, ಎಸಿಪಿ ಮತ್ತು ಎಸ್ ಪಿ ಗಳನ್ನು ಹೊಣೆ ಮಾಡಿ ಅವರ ವಿರುದ್ಧವೇ ಕ್ರಮ ತೆಗೆದುಕೊಳ್ಳುವುದಾಗಿ ಕಠಿಣ ಎಚ್ಚರಿಕೆ ನೀಡಿದರು.
ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ ಈಗ ಇರುವ ಕಾನೂನನ್ನು ಮತ್ತಷ್ಟು ಗಟ್ಟಿ ಮಾಡ್ತೇವೆ ಡ್ರಗ್ ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆವರೆಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ವಹಿಸಲಾಗುವುದು ಎಂದು ಸಿಎಂ ತಿಳಿಸಿದರು.
ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು ಮತ್ತು ಸಮರ್ಪಕಗೊಳಿಸಲು ಕ್ರಮ ತೆಗೆದುಕೊಂಡು
ಡ್ರಗ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ ಭರವಸೆ ನೀಡಿದರು.
ವಿದ್ಯಾರ್ಥಿಗಳು, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಮತ್ತು ಡ್ರಗ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕಲು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವ ದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ, ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ಪೂರ್ವ ವಿಭಾಗದಲ್ಲಿ ಡ್ರಗ್ ಹಾವಳಿ ತೀವ್ರವಾಗಿದೆ ಎಂಬ ಮಾಹಿತಿ ಸಿಕ್ಕಿದೆ,ಅದನ್ನ ಪೂರ್ಣ ನಿರ್ನಾಮ ಮಾಡಲು ನಿರ್ಧರಿಸಿದ್ದೇವೆ,ಒಡಿಶ್ಶಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ತರಲಾಗುತ್ತಿದೆ ಇದು ಅತ್ಯಂತ ಗಂಭೀರ ವಿಷಯವಾಗಿದ್ದು ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದರು.