ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತರೆ ನಟ ದರ್ಶನ್ ಗೆ ಸಧ್ಯಕ್ಕೆ ಜಾಮೀನು ಸಿಗಲಿಲ್ಲ.
ಜಾಮೀನು ಕೋರಿ ಸಲ್ಲಿಸಿದ್ದ ವಿಚಾರಣೆಯನ್ನ ಸೆ. 27ಕ್ಕೆ ಮುಂದೂಡಿ 57 ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಹತ್ಯೆ ಪ್ರಕರಣದ 15 ಹಾಗೂ 17ನೇ ಆರೋಪಿಗಳಾಗಿರುವ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ ಸಿಸಿಹೆಚ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪ್ರಕರಣದ 16ನೇ ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.
ಹೈಕೋರ್ಟ್ನಲ್ಲಿ ಕೇಶವ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ಮತ್ತು ಒಬ್ಬರ ವೈಯಕ್ತಿಕ ಶ್ಯೂರಿಟಿ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಜಾಮೀನು ಕೋರಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡು ಸೋಮವಾರಕ್ಕೆ ವಿಚಾರಣೆ ಮುಂದೂಡಿತ್ತು.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ವಿಶೇಷ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಕೂಡದು. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನ ಪುರಸ್ಕರಿಸಿದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಸೆ. 27ಕ್ಕೆ ಆದೇಶಿಸಿತು.