ಬೆಂಗಳೂರು: ಪ್ರಧಾನಿ ಮೋದಿಯವರು ನಮ್ಮ ಪಕ್ಷದ ಅಂತರ್ಕಲಹದ ಬಗ್ಗೆ ಭಾಷಣ ಮಾಡುವ ಹೊತ್ತಲ್ಲೇ, ಬಿಜೆಪಿಯ ಬಂಡಾಯ ನಾಯಕರು ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಸಭೆ ಸೇರಿ, ವಿಜಯೇಂದ್ರ ಪದಚ್ಯುತಿಗೆ ತಂತ್ರ ರೂಪಿಸುತ್ತಿರುವುದು ವಿಪರ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ, ಬಿಜೆಪಿಯ ರಕ್ತದಲ್ಲಿ ಹೇಗೆ ಕೋಮುವಾದ ಸೇರಿ ಕೊಂಡಿದೆಯೋ, ಅದೇ ರೀತಿ ಅಂತರ್ ಕಲಹವೂ ಸೇರಿಕೊಂಡಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಪ್ರಧಾನಿ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ ನಲ್ಲಿ ಅಂತರ್ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖಗೊಳ್ಳುತ್ತ ಲಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು,ಈ ಗೊಂದಲ ನಿವಾರಣೆಗಾಗಿ ಅವರು ತಕ್ಷಣ ಸ್ಪಷ್ಟೀಕರಣ ನೀಡ ಬೇಕೆಂದು ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳದ ದಿನವೇ ಇಲ್ಲ, ಪ್ರತಿನಿತ್ಯ ಆರೋಪ – ಪ್ರತ್ಯಾರೋಪ, ಪರಸ್ಪರ ದೂಷಣೆ – ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ ಎಂದು ಸಿದ್ದು ಟೀಕಿಸಿದ್ದಾರೆ.
ಸನ್ಮಾನ್ಯ ನರೇಂದ್ರ ಮೋದಿ ಅವರೇ, ದಯವಿಟ್ಟು ತಾವು ಬೆಳಿಗ್ಗೆ ಎದ್ದು ಕರ್ನಾಟಕದಿಂದ ಪ್ರಕಟವಾಗುವ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಪಕ್ಷದಲ್ಲಿ ನಡೆಯುವ ಅಂತರ್ಕಲಹದ ಒಂದು ಅಂದಾಜು ಸಿಗಬಹುದು,ಆಗ ನಿಮ್ಮ ಪಕ್ಷದ ಅಂತರ್ಕಲಹದ ಬೆಂಕಿಯನ್ನು ಶಮನ ಮಾಡಲು ಪ್ರಯತ್ನ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಳಿಗ್ಗೆ ಎದ್ದ ಕೂಡಲೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿ ಮೊದಲಾದವರು ದನಿಗೂಡಿಸಿ ಅಪ್ಪ-ಮಕ್ಕಳ ವಿರುದ್ದ ಬಗೆಬಗೆಯ ಆರೋಪಗಳನ್ನು ಮಾಡಿದ್ದಾರೆ. ಇದೀಗ ಉಚ್ಚಾಟಿತ ಬಿಜೆಪಿ ನಾಯಕ ಈಶ್ವರಪ್ಪನವರ ಮನೆಯಲ್ಲಿಯೇ ಕೂತು ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆ. ಇದನ್ನು ಅಂತರ್ಕಲಹ ಎಂದು ಕರೆಯದೆ ಪ್ರೇಮಸಲ್ಲಾಪ ಎನ್ನೋಣವೇ ಎಂದು ಸಿದ್ದರಾಮಯ್ಯ ವ್ಯಂಗ್ಯ ವಾಡಿದ್ದಾರೆ.
2011ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಪಕ್ಷದೊಳಗಿನ ಅಂತರ್ಕಲಹವೂ ಕಾರಣ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮರೆತುಬಿಟ್ಟಿದ್ದಾರೆ. ಅದರ ನಂತರ ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ವಾಜಪೇಯಿ – ಅಡ್ವಾಣಿಯವರನ್ನು ಸೇರಿದಂತೆ ಯಾರನ್ನೂ ಬಿಡದೆ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಕೊನೆಗೆ ಅವರನ್ನೇ ಕರೆತಂದು ಮುಖ್ಯಮಂತ್ರಿ ಮಾಡಿದ್ದಾಯಿತು, ನಂತರ ಅವರನ್ನು ಪದಚ್ಯುತಿಗೊಳಿಸಿಯೂ ಆಯಿತು. ಇವೆಲ್ಲದರ ಹಿಂದೆ ಪಕ್ಷದ ಅಂತರ್ಕಲಹ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ ಸಿಎಂ.
ದೇವರಾಜ ಅರಸು ನಂತರ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮೊಳಗೆ ಜಗಳ ಹುಟ್ಟುಹಾಕುವ ನಿಮ್ಮೆಲ್ಲರ ನಿರಂತರ ಪ್ರಯತ್ನದ ಹೊರತಾಗಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಿದ್ದು ತಿಳಿಸಿದ್ದಾರೆ.