ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.3ಕ್ಕೆ ವಿದ್ಯಕ್ತ ಚಾಲನೆ ದೊರೆಯಲಿದ್ದು, ಸಿದ್ದತಾ ಕಾರ್ಯಗಳು ಅಂತಿಮ ಹಂತಕ್ಕೆ ಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ ಅವರೊಂದಿಗೆ ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ಟೋಬರ್ 3ರಂದು 9.15ರಿಂದ 9.40 ರ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಂದೇ ಎಲ್ಲಾ ಕಾರ್ಯಕ್ರಮಗಳು ಕೂಡಾ ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.
ಅಕ್ಟೋಬರ್ 3ರಂದು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಆಗುತ್ತದೆ. ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನ ಸಿಎಂ ನೀಡಲಿದ್ದಾರೆ. 11ವೇದಿಕೆಗಳಲ್ಲಿ 508 ಕಲಾ ತಂಡಗಳು ಟೌನ್ ಹಾಲ್ ನಲ್ಲಿ ನಾಟಕ ಪ್ರದರ್ಶನ ಮಾಡಲಿದ್ದಾರೆ. ಅ 5ರಂದು ಪ್ರಭುತ್ವ ಮತ್ತು ಸಂವಿಧಾನ ಆಶಯದಲ್ಲಿ ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಹೇಳಿದರು.
ಈ ಬಾರಿ ಏರ್ ಶೋ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ,ಆದರೆ ಇತರೆ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.
ಯುವದಸರಾಕ್ಕೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ, ಖ್ಯಾತ ಸಂಗೀತ ನಿರ್ದೇಶಕರು ಭಾಗಿಯಾಗುತ್ತಿದ್ದಾರೆ, ಮಹರಾಜ ಕಾಲೇಜು ಮೈದಾನದಲ್ಲಿ ಟ್ರಾಫಿಕ್ ಸಮಸ್ಯೆ, ಲಾ ಅಂಡ್ ಆರ್ಡರ್ ಗೆ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ನಗರದ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಯುವ ದಸರಾಕ್ಕೆ ಆಗಮಿಸುವ ಜನರಿಗೆ ಬಸ್ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ಮಾಡಲಾಗಿದೆ, ಕಾರ್ಯಕ್ರಮ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತದೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಸೆ. 26ರಿಂದ ದಸರಾ ಗೋಲ್ಡ್ ಪಾಸ್ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ. ಈಗಲೂ ಕೂಡ ಆನ್ ಲೈನ್ ನಲ್ಲಿ ಗೋಲ್ಡ್ ಪಾಸ್ ಮಾರಾಟಕ್ಕೆ ಇದೆ. ಪರಿಸ್ಥಿತಿ ನೋಡಿ ದಸರಾ ಗೋಲ್ಡ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.