ನಾಡಹಬ್ಬ ದಸರಾದಲ್ಲಿ ಹೆಚ್ಚು ಜನ ಭಾಗವಹಿಸಿ: ಸಿದ್ದರಾಮಯ್ಯ

ಮೈಸೂರು: ಮೈಸೂರು ದಸರಾ ಜನರ ಹಬ್ಬವಾಗಿದ್ದು ಹೆಚ್ಚು ಜನರು ಭಾಗವಹಿಸುವ ಮೂಲಕ ದಸರಾ ಯಾಶಸ್ವಿಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು

ಮಹಾರಾಜ ಕಾಲೇಜು ಮೈದಾನದಲ್ಲಿ‌ ದಸರಾ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ, ಇಂದಿನಿಂದ 9 ದಿನಗಳ ಕಾಲ ನವರಾತ್ರಿ ಹಾಗೂ 10 ನೆಯ ದಿನ ವಿಜಯದಶಮಿ ನಡೆಯುತ್ತದೆ. ನಾಡಹಬ್ಬ ದಸರಾ ಉದ್ದೇಶ ಶಿಷ್ಟರ ರಕ್ಷಣೆ ಹಾಗೂ ದುಷ್ಟರ ಶಿಕ್ಷೆ ನೀಡುವುದು ಎಂದು ತಿಳಿಸಿದರು.

ಮೈಸೂರು ದಸರಾ ಜನರ ಹಬ್ಬ, ದೇಶ ವಿದೇಶಗಳಿಂದ ಲಕ್ಷಾಂತರ ಜನ ದಸರಾ ವೀಕ್ಷಣೆಗೆ ಆಗಮಿಸುತ್ತಾರೆ. ಆಹಾರ ಮೇಳದಲ್ಲಿ ನೂರಾರು ಸ್ಟಾಲ್ ಗಳು ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ ರಾಜ್ಯದಲ್ಲಿ 7 ಕೋಟಿ ಜನರು ಇದ್ದು ಇವರಲ್ಲಿ 4.5 ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಪಡಿತರ ನೀಡಲಾಗುತ್ತಿದೆ.  ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ ಜಿ ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆಯಡಿ ಇದ್ದು ಇದರಲ್ಲಿ 5 ಕೆ ಜಿ ಅಕ್ಕಿ ಹಾಗೂ ಉಳಿದ 5 ಕೆ ಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಮೇಳದಲ್ಲಿ 108 ಮಳಿಗೆಗಳನ್ನು ತೆರೆಯಲಾಗಿದೆ. ಮಳಿಗೆ ಗಳು ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತವೆ. 130 ಬಗೆಯ ವಿವಿಧ ತಿಂಡಿಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ,ವಿಧಾನ ಪರಿಷತ್ ಸದಸ್ಯ ಡಿ ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.