ರೈತರ ಪರ ಸದಾ ಸರ್ಕಾರ ಇರಲಿದೆ: ಎನ್.ಚೆಲುವರಾಯಸ್ವಾಮಿ

ಮೈಸೂರು: ಇತ್ತೀಚೆಗೆ ಜನರಲ್ಲಿ ವ್ಯವಸಾಯದ ಮೇಲಿನ ನಿರಾಸಕ್ತಿಯಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ‌ಕೃಷಿ ಸಚಿವ ಚೆಲುವರಾಯಸ್ವಾಮಿ ವಿಷಾದಿಸಿದ್ದಾರೆ.

ರೈತರಿಗೆ ಬೆನ್ನೆಲುಬಾಗಿರುವ ಸರ್ಕಾರವು ಅವರಿಗೆ ಕೃಷಿಯಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವಾಗಲೂ ರೈತರ ಪರ ಇರುತ್ತದೆ ಎಂದು ತಿಳಿಸಿದರು.

ಜೆ.ಕೆ.ಗ್ರೌಂಡ್,ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ಸಭಾಭವನದಲ್ಲಿ ರೈತ ದಸರಾ ಪ್ರಯುಕ್ತ ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಪ್ರಗತಿಪರ ರೈತರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಗ್ಯಾರಂಟಿಗಳು ಸಹಕಾರಿ ಆಗಿದ್ದು, ಗ್ಯಾರಂಟಿಗಳನ್ನು ಇನ್ನೂ ಹೆಚ್ಚಿನ ರೈತರಿಗೆ ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಸರ್ಕಾರ ಜಾರಿಗೆ ತಂದಿರುವ ಹೊಸ-ಹೊಸ ಯೋಜನೆಗಳು ರೈತರಿಗೆ ಸಹಕಾರಿಯಾಗುತ್ತಿದ್ದು, ಮುಂದೆ ರೈತರ ಜಾನುವಾರುಗಳಿಗೆ ವಿಮೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ,ರೈತರು ಅಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಸಣ್ಣ ರೈತರಿಗೆ ಈ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣ ರೈತರಿಗೆ ಅನುಕೂಲವಾಗುವಂತಹ ಯೋಜನೆ ತರಬೇಕು. ಈ ಕುರಿತು ಸಿ.ಎಂ ಜತೆ ಚರ್ಚಿಸಿ ಯೋಜನೆ ರೂಪಿಸುತ್ತೇವೆ ಎಂದು ಭರವಸೆ ನೀಡಿದರು

ಕೃಷಿಯ ವಿಜ್ಞಾನಿಗಳು ರೈತರಿಗೆ ಕೃಷಿಯ ಬಗ್ಗೆ ಶ್ರೀ ಗಂಧದ ಬೇಸಾಯ ಮತ್ತು ಮಾರುಕಟ್ಟೆ, ರೈತರ ಆದಾಯ ವೃದ್ಧಿಗಾಗಿ ಸುಸ್ಥಿರ ಕೃಷಿ ಮತ್ತು ವಿದೇಶಿ ತರಕಾರಿ ಮತ್ತು ಹಣ್ಣುಗಳ ಬೇಸಾಯ ತಾಂತ್ರಿಕತೆ, ಆಧುನಿಕ ಕಾಲದ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಸಚಿವರ ಎಸ್.ಎಸ್.ಮಲ್ಲಿಕಾರ್ಜುನ,
ಶಾಸಕ ಕೆ.ಹರೀಶ್ ಗೌಡ, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ರೈತರ ದಸರಾ ಉಪ ಸಮಿತಿ ಅಧ್ಯಕ್ಷ ಕರೀಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ರವಿ ಮತ್ತಿತರರು ಉಪಸ್ಥಿತರಿದ್ದರು.