ನಮ್ಮ ಪರಂಪರೆ ಪಾರಂಪರಿಕ ಕಟ್ಟಡಗಳ ಉಳಿಸುವುದು ಯುವ ಪೀಳಿಗೆಯ ಕರ್ತವ್ಯ-ದೇವರಾಜು

ಮೈಸೂರು: ಸಾಂಸ್ಕೃತಿಕ ನಗರಿ ನಮ್ಮ ಮೈಸೂರಿನಲ್ಲಿ ಹಿರಿಯರು ಕಷ್ಟ ಪಟ್ಟು ನಿರ್ಮಾಣ ಮಾಡಿರುವ ಅನೇಕ ಪಾರಂಪರಿಕ ಕಟ್ಟಡಗಳಿದ್ದು ಅವುಗಳನ್ನು ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜೊತೆಗೆ ಯುವ ಪೀಳಿಗೆಯ ಮೇಲಿದೆ ಎಂದು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಹೇಳಿದರು.

ಭಾನುವಾರ ನಗರದ ಪುರಭವನದ ಬಳಿ ಆಯೋಜಿಸ ಲಾಗಿದ್ದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಟಾಂಗ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆಯನ್ನು ಉಳಿಸಲಾಗುವುದಿಲ್ಲ. ಈ ನಡಿಗೆಗಳು ಹಾಗೂ ಸವಾರಿಗಳು ಯುವಜನರಲ್ಲಿ ಅರಿವನ್ನು ಮೂಡಿಸಲು ಆಯೋಜಿಸುವ ಒಂದು ಕಾರ್ಯಕ್ರಮ ಇದರಲ್ಲಿ ತಿಳಿದುಕೊಂಡಂತಹ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಸಂರಕ್ಷಣೆ ಮಾಡಲಾಗಿಲ್ಲದ ಹಲವಾರು ಕಟ್ಟಡಗಲಿವೆ ಹಾಗೂ ವಾಸ್ತು ಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇರುವುದಿಲ್ಲ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿ ಗೊಳಿಸಬೇಕು ಎಂದು ಹೇಳಿದರು.
ನಮ್ಮ ಮೈಸೂರು ಸಂಸ್ಥಾನದ ರಾಜರು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದರ ಪ್ರತಿರೂಪವಾಗಿ ಇಂದು ಮೈಸೂರಿನಲ್ಲಿ ಹಲವಾರು ವಿಶಿಷ್ಟ ಮತ್ತು ಸುಂದರ ಕಟ್ಟಡಗಳಾದ ಜಗನ್ಮೋಹನ ಅರಮನೆ, ಮೈಸೂರು ಮೆಡಿಕಲ್ ಕಾಲೇಜು, ಕೆ ಆರ್ ಹಾಸ್ಪಿಟಲ್ ಸೇರಿದಂತೆ ಹಲವಾರು ಕಟ್ಟಡಗಳಿವೆ ಅವುಗಳನ್ನು ಉಳಿಸಿಕೊಂಡು ಹೋಗಬೇಕು ಇದರ ಬಗ್ಗೆ ಯುವ ಪೀಳಿಗೆಗಳಿಗೆ ಮಾಹಿತಿ ಕೊಡಬೇಕು. ಹಾಗೆ ಯುವ ಪೀಳಿಗೆಯು ಮಾಹಿತಿ ಪಡೆಯಲು ತಾವೇ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ನಾಗೇಶ್ ಬೆಟ್ಟಕೋಟೆ ಅವರು ಮಾತನಾಡಿ, ನಮ್ಮಲ್ಲಿ ಕಲೆಗಳಿಗೆ, ಪಾರಂಪರಿಕ ಕಟ್ಟಡಕ್ಕೆ ಆದ್ಯತೆ ಯನ್ನು ತಂದುಕೊಟ್ಟ ದ್ದು ಮೈಸೂರಿನ ರಾಜ ಮನೆತನ, ಅಂತಹ ನಾಡಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಎಂಬುದು ಅಳಿದು ಹೋಗಬಾರದು ಎಂದು ಆಶಿಸಿದರು.

ಪಾರಂಪರಿಕ ನಡಿಗೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350 ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು.

ಪಾರಂಪರಿಕ ನಡಿಗೆಯು ರಂಗಾಚಾರ್ಲು ಪುರಭವನ ದಿಂದ ಪ್ರಾರಂಭವಾಗಿ ಪಾರಂಪರಿಕ ಕಟ್ಟಡಗಳ ಮುಂದೆ ಸಾಗಿತು.

ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವತಿಯಿಂದ ಮೈಸೂರಿನಲ್ಲಿರುವ ಹಲವಾರು ಪಾರಂಪರಿಕ ಕಟ್ಟಡಗಳ ಬಗ್ಗೆ ಕುಳಿತಲ್ಲೇ ಮೊಬೈಲ್ ಮೂಲಕ ಮಾಹಿತಿ ತಿಳಿಯಲು ವಿ.ಆರ್ ಕಾರ್ಡ್ ಹೊರತರಲಾಗಿದ್ದು, ಕಾರ್ಡ್ ನ ಹಿಂಭಾಗ ದಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಪ್ ಡೌನ್ಲೋಡ್ ಆಗುತ್ತದೆ. ಆಪ್ ನಲ್ಲಿರುವ ಕಣ್ಣಿನ ಸಿಂಬಲ್ ಅನ್ನು ಸ್ಕ್ಯಾನ್ ಮಾಡಿದಾಗ ಮೈಸೂರು ವಿಶ್ವ ವಿದ್ಯಾನಿಲಯ, ಅರಮನೆ ಸೇರಿದಂತೆ ಪಾರಂಪರಿಕ ಕಟ್ಟಡಗಳ ವೀಕ್ಷಣೆ ಜೊತೆಗೆ ಮಾಹಿತಿ ಪಡೆಯಬಹುದಾಗಿದೆ. ಕಾರ್ಡ್ ನ ಬೆಲೆ 10 ರೂ. ಆಗಿದ್ದು, ಪುರಾತತ್ವ ಇಲಾಖೆಯಲ್ಲಿ ಪಡೆಯಬಹುದಾಗಿದೆ.