ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ:ಸಿಎಂ

ಬೆಂಗಳೂರು: ಸಾಮಾಜಿಕ ಆರ್ಥಿಕ , ಶೈಕ್ಷಣಿಕ ಸಮೀಕ್ಷೆ ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ ಎಂದು ‌ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ, ಅಕ್ಟೋಬರ್ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಶಾಸಕರು ಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂ ದಿಗೆ ಸಿಎಂ ಮಾತನಾಡಿದರು.

ವಿಪಕ್ಷಗಳ ನಾಯಕರೂ ಸೇರಿದಂತೆ ಸುಮಾರು ಹಿಂದುಳಿದ ವರ್ಗಗಳ 30 ಜನ ಶಾಸಕರು ಭೇಟಿ ಮಾಡಿ,ಸಾಮಾಜಿಕ ಆರ್ಥಿಕ,ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ,ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯೋಗದವರು ಬಹಳ ಸಮಯ ತೆಗೆದುಕೊಂಡು ಸಮೀಕ್ಷೆ ನಡೆಸಿದ್ದಾರೆ ಎಂದು ಹೇಳಿದರು.

ರಾಜ್ಯದ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುವುದಾಗಿ ಶ್ರೀ ಕಾಂತರಾಜು ಅವರು ತಿಳಿಸಿದ್ದಾರೆ. ನಾನು ಇದುವರೆಗೆ ವರದಿಯನ್ನು ಪರಿಶೀಲಿಸಿಲ್ಲ,ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂತರಾಜು ವರದಿ ಪೂರ್ಣಗೊಂಡಿರ ಲಿಲ್ಲ. ಆದ್ದರಿಂದ ನನ್ನ ಅವಧಿಯಲ್ಲಿ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಮತ್ತು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ಸಿಎಂ ತಿಳಿಸಿದರು.

ನಂತರ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಾಂತುರಾಜು ಅವರು ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದರು. ಆದರೆ ಕುಮಾರಸ್ವಾಮಿಯವರು ವರದಿ ಸ್ವೀಕರಿಸಲು ಒಪ್ಪಿರಲಿಲ್ಲ. ನಂತರ ಬಿಜೆಪಿ ಸರ್ಕಾರ ಬಂದರೂ , ವರದಿಯನ್ನು ಸ್ವೀಕರಿಸಲಿಲ್ಲ ಎಂದು ವಿವರಿಸಿದರು.

ನಂತರ ಕಾಂತರಾಜು ಅವರ ಅಧ್ಯಕ್ಷರ ಅವಧಿ ಪೂರ್ಣಗೊಂಡ ನಂತರ ಜಯಪ್ರಕಾಶ್ ಹೆಗ್ಗಡೆ ಯವರು ಆಯೋಗದ ಅಧ್ಯಕ್ಷರಾದರು. ಅವರು ಕೋರಿದಂತೆ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ಕೊಡಲಾಗಿತ್ತು. ನಂತರ ಆ ವರದಿಯನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಿದ ವರದಿಯನ್ನು ಜಾರಿಗೊಳಿಸಲು ಎಲ್ಲರಿಂದಲೂ ಒತ್ತಾಯ ಬಂದಿದೆ. ಈ ಹಿನ್ನಲೆಯಲ್ಲಿ ಇಂದು ಹಿಂದುಳಿದ ವರ್ಗಗಳ ಶಾಸಕರು ಸಭೆ ನಡೆಸಿ ವರದಿಯನ್ನು ಜಾರಿಗೊಳಿಸು ವಂತೆ ಮನವಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.